ರೇಷ್ಮೆ ಹುಳದ ಸೂಪ್, ಗೆದ್ದಲು ಹುಳದ ಬರ್ಗರ್… ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳದಲ್ಲಿ ಕೀಟ ವಿಸ್ಮಯ
- ಕೃಷಿ ಮೇಳದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ ರೇಷ್ಮೆ ಹುಳುವಿನ ಸೂಪ್, ಬಾರ್ಬಿ ಕ್ಯೂ, ಕಬಾಬ್, ಗೆದ್ದಲು ಹುಳುಗಳ ಬರ್ಗರ್
- ಜಿರಳೆ ಪಕೋಡ, ಮಿಡತೆಗಳ ಫ್ರೈ ಮತ್ತು ಕಬಾಬ್ ಹೀಗೆ ಹಲವು ವೈವಿಧ್ಯಮಯ ತಿನಿಸುಗಳ ವಿಶೇಷ
- ಜನರನ್ನು ಸೆಳೆಯುತ್ತಿವೆ ಕಣಜದ ಮಸಾಲೆ, ಮಿಡತೆಗಳ ಫ್ರೈ ಇತ್ಯಾದಿಗಳು, ಪ್ಯಾಕ್ ಮಾಡಿದ ಪದಾರ್ಥಗಳ ಪ್ರದರ್ಶನ
- ಕೃಷಿ ಮೇಳದಲ್ಲಿ 1.08 ಕೋಟಿ ರೂ. ಆರ್ಥಿಕ ವಹಿವಾಟು, 13,840 ಜನರಿಂದ ರಿಯಾಯಿತಿ ದರದ ಊಟ ಸೇವನೆ
ಬೆಂಗಳೂರು: ರೇಷ್ಮೆ ಹುಳುವಿನ ಸೂಪ್ , ಬಾರ್ಬಿ ಕ್ಯೂ, ಕಬಾಬ್, ಗೆದ್ದಲು ಹುಳುಗಳ ಬರ್ಗರ್ ಇತ್ಯಾದಿ ಕೀಟ ತಿನಿಸುಗಳು ಕೃಷಿ ಮೇಳದಲ್ಲಿ ಗ್ರಾಹಕರನ್ನು ಸೆಳೆಯುತ್ತಿವೆ.
ಪ್ರಕೃತಿಯ ನಡುವೆ ಇರುವ ಹಲವು ಕೀಟ, ಹುಳ-ಹುಪ್ಪಟೆಗಳು ಆರೋಗ್ಯಕ್ಕೆ ಹಾನಿಕಾರಕವಲ್ಲ. ಹೀಗಾಗಿ, ಚೀನಾದ ಜನರು ಅವುಗಳನ್ನು ನಿತ್ಯವೂ ತಮ್ಮ ಆಹಾರದಲ್ಲಿ ಬಳಸುತ್ತಾರೆ. ಆ ತಿನಿಸುಗಳು ಇದೀಗ ಜಿಕೆವಿಕೆ ಆವರಣಕ್ಕೂ ಬಂದಿವೆ.
ಜಿರಳೆ ಪಕೋಡ, ರೇಷ್ಮೆ ಹುಳಗಳ ಕಬಾಬ್, ರಾಣಿ ಗೆದ್ದಲಿನ ಬರ್ಗರ್, ಮಿಡತೆಗಳ ಫ್ರೈ ಮತ್ತು ಕಬಾಬ್ ಹೀಗೆ ಹಲವು ವೈವಿಧ್ಯಮಯ ತಿನಿಸುಗಳು ವಿಶೇಷವಾಗಿವೆ. ಜತೆಗೆ ಕಣಜದ ಮಸಾಲೆ, ಮಿಡತೆಗಳ ಫ್ರೈ ಇತ್ಯಾದಿಗಳು ಗಮನಸೆಳೆಯುತ್ತಿವೆ. ಇವುಗಳನ್ನು ತಯಾರಿಸಿ ಪ್ಯಾಕ್ ಮಾಡಿದ ಪದಾರ್ಥಗಳನ್ನು ಕೀಟ ವಿಸ್ಮಯ ವಿಭಾಗದಲ್ಲಿ ಪ್ರದರ್ಶಿಸಲಾಗಿದ್ದು, ನೋಡುಗರನ್ನು ವಿಶೇಷವಾಗಿ ಸೆಳೆಯುತ್ತಿವೆ.
ಹಸಿ ಅವರೆಕಾಯಿ ಸುಲಿಯುವ ಯಂತ್ರ
ಹಸಿ ಅವರೆಕಾಯಿ, ತೊಗರಿಕಾಯಿ, ಹಲಸಂದೆ ಕಾಯಿ, ಬಟಾಣಿ ಇತ್ಯಾದಿ ಹಸಿ ತರಕಾರಿಗಳನ್ನು ಬಿಡಿಸುವುದೇ ತಲೆನೋವಿನ ಕೆಲಸ. ಇದೀಗ ಅವುಗಳನ್ನು ಬಿಡಿಸಲೂ ಮೆಷಿನ್ ಬಂದಿದೆ. ಒಂದು ಗಂಟೆಗೆ 100 ಕೆ.ಜಿ. ಕಾಯಿಗಳನ್ನು ಬಿಡಿಸಬಹುದಾದ ಯಂತ್ರ ಇದಾಗಿದೆ.
ಕಾಯಿಗಳನ್ನು ಸುಲಿದು, ನಂತರ ಅವುಗಳನ್ನು ಹಿದಕವರೆಯಾಗಿಯೂ ಮಾಡಿಕೊಡುವ ವಿಶೇಷ ಗುಣಗಳ ಯಂತ್ರ ಇದಾಗಿದೆ. ಈ ಯಂತ್ರವನ್ನು ವಾಣಿಜ್ಯ ಉದ್ದೇಶಕ್ಕೂ ಬಳಸಬಹುದು. ಡಾ. ಎಂ. ಮಂಜುನಾಥ ನೇತೃತ್ವದೊಂದಿಗೆ ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಅವರ ಮಾರ್ಗದರ್ಶನದಲ್ಲಿ ಈ ಯಂತ್ರವನ್ನು ಅನ್ವೇಷಿಸಲಾಗಿದೆ.
ತಾಜಾ ಹಸಿರು ದ್ವಿದಳ ಧಾನ್ಯಗಳಿಗೆ ಸಾರ್ವತ್ರಿಕ ಶೆಲ್ಲಿಂಗ್ ಯಂತ್ರ ಅಭಿವೃದ್ಧಿಪಡಿಸಲಾಗಿದೆ. ಇದು ಶೇ. 95ರಷ್ಟು ದಕ್ಷತೆಯನ್ನು ಹೊಂದಿದೆ ಮತ್ತು ಇದು 0.5 ಎಚ್‌ಪಿ ಮೋಟರ್‌ನೊಂದಿಗೆ ಕಾರ್ಯನಿರ್ವಹಿಸಬಲ್ಲದು. ದ್ವಿದಳ ಧಾನ್ಯಗಳು ಲಭ್ಯವಿಲ್ಲದ/ಬೆಳೆಯದ ಸ್ಥಳಗಳಿಗೆ ಅವುಗಳನ್ನು ವಿತರಿಸಲಾಗುತ್ತದೆ.
ಪೊರಕೆ ಕಡ್ಡಿ ತಯಾರಿಸುವ ಯಂತ್ರ…
ತೆಂಗಿನ ಗರಿಗಳ ಪೊರಕೆ ಮಾಡುವುದು ಸುಲಭದ ಕೆಲಸವಲ್ಲ. ಒಂದೊಂದೇ ಗರಿಯನ್ನು ಕೈಯಲ್ಲಿ ಹಿಡಿದು ಅದರಿಂದ ಕಡ್ಡಿಯನ್ನು ಬೇರ್ಪಡಿಸಬೇಕು. ಹಾಗಾಗಿಯೇ ತೆಂಗಿನ ಗರಿಗಳಿಂದ ಕಡ್ಡಿಗಳನ್ನು ಸುಲಭವಾಗಿ ಬೇರ್ಪಡಿಸುವ ಪೊರಕೆ ಕಡ್ಡಿ ತಯಾರಿಸುವ ಯಂತ್ರವೊಂದು ಎಲ್ಲರ ಗಮನ ಸೆಳೆಯುತ್ತಿದೆ.
ತಮಿಳುನಾಡಿನ ಎಆರ್‌ಎಸ್ ಎಂಜಿನಿಯರಿಂಗ್ ಕಂಪನಿಯು ಈ ಯಂತ್ರವನ್ನು ಕೃಷಿ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದೆ. ಗಂಟೆಗೆ 3 ರಿಂದ 5 ಕೆಜಿ ಅಥವಾ 4 ರಿಂದ 5 ಹಿಡಿ ಕಡ್ಡಿಯನ್ನು ಯಂತ್ರವು ತೆಗೆಯುತ್ತದೆ..
ರೈತರ ಗಮನ ಸೆಳೆದ ಶ್ರೀಗಂಧ ಮಳಿಗೆ
ರೈತರಿಂದ, ರೈತರಿಗಾಗಿ ಹಾಗೂ ರೈತರಿಗೋಸ್ಕರ ಸ್ಥಾಪಿಸಿರುವ ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಉತ್ಕೃಷ್ಟವಾದ ಶ್ರೀಗಂಧ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಉತ್ಪನ್ನಗಳನ್ನು ಶ್ರೀಗಂಧ ಮರ ಮೂಲದ ಪ್ರಮಾಣ ಪತ್ರ – ಪ್ರಮಾಣಕ ಮುದ್ರೆಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಅಪ್ಪಟ ಶ್ರೀಗಂಧದ ಮರದ ಉತ್ಪನ್ನಗಳನ್ನು, ರೈತರ ಭೂಮಿಯಿಂದ ತಂದು ಸಂಸ್ಕರಿಸಿ, ನೇರವಾಗಿ ಗ್ರಾಹಕರಿಗೆ ಕೈಗೆಟಕುವ ದರಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
