ಬೆಂಗಳೂರು ಪಿಜಿ ಮಾಲೀಕರಿಗೆ GBA ಶಾಕ್: 14 ವಸತಿ ಗೃಹಗಳಿಗೆ ಬೀಗ ಜಡಿದ ಅಧಿಕಾರಿಗಳು, ಕಾರಣ..?

ಬೆಂಗಳೂರು: ಪೂರ್ವ ನಗರ ಪಾಲಿಕೆ ದಿಟ್ಟ ನಿರ್ಧಾರ ಕೈಗೊಂಡಿದ್ದು, ತನ್ನ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್.ಒ.ಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ 14 ವಸತಿ ಗೃಹಗಳಿಗೆ ಬೀಗ ಜಡಿದಿದೆ.

ನವೆಂಬರ್ 10-15 ರವರೆಗೆ ವ್ಯಾಪಾರ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ಪಾಲಿಕೆ ಆರೋಗ್ಯ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ತಿಳಿಸಿದ್ದಾರೆ.

ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿ.ಬಿ.ಎ. ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ 14 ಪೇಯಿಂಗ್ ಗೆಸ್ಟ್ ಗಳನ್ನು ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಮಾರ್ಗದರ್ಶನದಲ್ಲಿ, ಆರೋಗ್ಯಾಧಿಕಾರಿ ಡಾ. ಸವಿತಾ ರವರ ನೇತೃತ್ವದಲ್ಲಿ ಆರೋಗ್ಯ ವೈದ್ಯಾಧಿಕಾರಿಗಳ ತಂಡವು ಪರಿಶೀಲನೆ ನಡೆಸಿ ವಸತಿಗೃಹಗಳ (ಪಿಜಿ) ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.

ನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 10.11.2025 ರಿಂದ 15.11.2025 ರವರೆಗೆ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಗರ ಪಾಲಿಕೆ ವ್ಯಾಪ್ತಿಯ 17 ವಾರ್ಡ್ ಕಚೇರಿಗಳಲ್ಲಿ ನಡೆಸಲಾಗಿರುತ್ತದೆ. ಈ ಅವಧಿಯಲ್ಲಿ ನಗರ ಪಾಲಿಕೆಯ 17 ವಾರ್ಡ್ ಗಳ ವ್ಯಾಪ್ತಿಯಲ್ಲಿ 466 ಉದ್ದಿಮೆದಾರರು ‘ಏಕ ಗವಾಕ್ಷಿ’ ಅಡಿಯಲ್ಲಿ ಒಟ್ಟು ರೂ.25,52,800 ಶುಲ್ಕ ಪಾವತಿಸಿ, ಎಲ್ಲ ಅಗತ್ಯ ದಾಖಲೆಗಳನ್ನು ಮಧ್ಯವರ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಅರ್ಜಿ ಸಲ್ಲಿಸಿದ ದಿನದಂದೇ ಉದ್ದಿಮೆ ಪರವಾನಗಿಯನ್ನು ಪಡೆದುಕೊಂಡರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಅಗತ್ಯ ದಾಖಲೆಗಳಾದ ವಾಣಿಜ್ಯ ಮಳಿಗೆ ಕರಾರು ಪತ್ರ ಹಾಗೂ ವಿದ್ಯುತ್ ಬಿಲ್ ಸಲ್ಲಿಸಿದ ದಿನವೇ ಉದ್ದಿಮೆದಾರರಿಗೆ ಉದ್ದಿಮೆ ಪರವಾನಗಿ ನೀಡಲು ಪೂರ್ವ ನಗರ ಪಾಲಿಕೆಯು ವ್ಯವಸ್ಥೆಯನ್ನು ಕಲ್ಪಿಸಿದ್ದು, 17 ವಾರ್ಡ್ಗಗಳೊಂದಿಗೆ ವಾಣಿಜ್ಯ ಪ್ರದೇಶಗಳಲ್ಲೂ ವಿಶೇಷ ಶಿಬಿರ ಏರ್ಪಡಿಸುವ ಮೂಲಕ ಪಾರದರ್ಶಕವಾಗಿ, ವೇಗವಾಗಿ ಮತ್ತು ನಾಗರಿಕ–ಸ್ನೇಹಿ ಉದ್ದಿಮೆ ಪರವಾಗಿ ಸೇವೆಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *