ಗಾಂಧಿ-ಗುರು ಸಮಾವೇಶಕ್ಕೆ ಡಿಕೆಶಿಗೆ ಇಲ್ಲ ಆಹ್ವಾನ; ಅಹಿಂದ ನಾಯಕರ ಒಗ್ಗಟ್ಟಿನ ಸಂದೇಶಕ್ಕೆ ಡಿಸಿಎಂ ಬಣ ಅಸಮಾಧಾನ

ಹೈಲೈಟ್ಸ್‌:

  • ಮಂಗಳೂರಿನಲ್ಲಿ ನಡೆದ ಗಾಂಧಿ – ಗುರು ಸಂವಾದಕ್ಕೆ 100 ವರ್ಷ
  • ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
  • ಡಿಕೆಶಿ ಬಣದಲ್ಲಿ ಅಸಮಾಧಾನ ಹೆಚ್ಚಾಗಿದೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ನಾನಾ ವ್ಯಾಖ್ಯಾನಕ್ಕೆ ಕಾರಣವಾಗಿತ್ತು.

ನಾಯಕತ್ವ ಭಿನ್ನಮತಕ್ಕೆ ಬ್ರೇಕ್ ಬೀಳಲಿದೆ ಎಂಬ ನಿರೀಕ್ಷೆಯೂ ಕಾಂಗ್ರೆಸ್ ಕಾರ್ಯಕರ್ತರಲ್ಲಿತ್ತು. ಈ ನಡುವೆ ಮಂಗಳೂರಿನಲ್ಲಿ ನಡೆದ ಗಾಂಧಿ – ಗುರು ಸಂವಾದಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶ ಒಗ್ಗಟ್ಟಿನ ಬೆನ್ನಲ್ಲೇ ಬಿಕ್ಕಟ್ಟು ಬಹಿರಂಗಗೊಳಿಸಿದೆ.

ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸಿದ್ದರಾಮಯ್ಯಗೆ ಸಾಥ್ ನೀಡಿದ್ದು, ಅಹಿಂದ ಸಚಿವರಾದ ಸತೀಶ್ ಜಾರಕಿಹೊಳಿ, ಡಾ. ಜಿ ಪರಮೇಶ್ವರ್, ಜಮೀರ್ ಅಹ್ಮದ್ ಖಾನ್ ಹಾಗೂ ಆಪ್ತ ಬಣದ ನಾಯಕರು. ಆದರೆ ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಇರಲಿಲ್ಲ.

ಫ್ಲೆಕ್ಸ್ ನಲ್ಲೂ ಕಾಣದ ಫೋಟೋ

ಮಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಫೋಟೋ ಇರಲಿಲ್ಲ. ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ನಾಯಕದ ಫ್ಲೆಕ್ಸ್ ಗಳು ಇದ್ದವು. ಆದರೆ ಡಿಕೆಶಿ ಫೋಟೋ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದು ಉದ್ದೇಶಪೂರ್ವಕವೇ ಅಥವಾ ಆಕಸ್ಮಿಕವೇ ಎಂಬುದೇ ಕುತೂಹಲ‌.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ ಸಿ ವೇಣುಗೋಪಾಲ್ ಇದ್ದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಕೆ ಸಿ ವೇಣುಗೋಪಾಲ್ ಅವರು ಮಾತುಕತೆಯನ್ನು ನಡೆಸಿದ್ದಾರೆ. ವೇದಿಕೆಯಲ್ಲಿ ಅಹಿಂದ ನಾಯಕರು ಒಟ್ಟಾಗಿ ಕಾಣಿಸುವ ಮೂಲಕ ಸಂದೇಶ ರವಾನೆ ಮಾಡಿದ್ದಾರೆ‌. ಆದರೆ ಡಿಕೆಶಿ ಆಹ್ವಾನ ಇಲ್ಲದೆ ಇರುವುದರ ಹಿಂದಿನ ಉದ್ದೇಶ ಏನು ಎಂಬುದು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಡಿಕೆಶಿ ಪರ ಘೋಷಣೆ

ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ಪರವಾಗಿ ಅವರ ಅಭಿಮಾನಿಗಳು ಘೋಷಣೆ ಕೂಗಿದ್ದರು. ಇದಕ್ಕೆ ಕೌಂಟರ್ ಎಂಬಂತೆ ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಣೆ ಕೂಗಿದ್ದರು. ಒಟ್ಟಿನಲ್ಲಿ ಈ ಬೆಳೆವಣಿಗೆ ಕಾಂಗ್ರೆಸ್ ನಲ್ಲಿ ಗೊಂದಲ ಮುಂದಿವರಿದಿರುವುದರ ಸಂಕೇತ ಎಂದೇ ವ್ಯಾಖ್ಯಾನ ಮಾಡಲಾಗ್ತಿದೆ.

ಡಿಕೆ ಬಣದಲ್ಲಿ ಅಸಮಾಧಾನ

ಇನ್ನು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಹಾಗೂ ಆ ತದನಂತರದಲ್ಲಿ ನಡೆಯುತ್ತಿರುವ ಬೆಳವಣಿಗೆ ಡಿಕೆ ಶಿವಕುಮಾರ್ ಬಣದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೆ ಅಹಿಂದ ನಾಯಕರ ಒಗ್ಗಟ್ಟು ಡಿಕೆಶಿಗೆ ಆಗುತ್ತಿರುವ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗ್ತಿದೆ. ಹೀಗಾಗಿ ಗೊಂದಲ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರತೆ ಪಡೆಯುವುದರಲ್ಲಿ ಸಂಶಯವಿಲ್ಲ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *