ಧಾರವಾಡ ಮರ್ಯಾದಾ ಹತ್ಯೆ: ‘ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಮಗಳು ಬೇರೆ ಜಾತಿ ಮದುವೆಯಾದ್ರೆ ತಪ್ಪಾ’!

ಧಾರವಾಡ: ದಲಿತ ಯುವಕನನ್ನು ಮದುವೆಯಾಗಿ ಗರ್ಭಿಣಿಯಾಗಿದ್ದ ಮಹಿಳೆಯನ್ನು ಆಕೆಯ ಪೋಷಕರೇ ಕೊಂದು ಹಾಕಿರುವ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದ್ದು, ಸಂತ್ರಸ್ಥೆಯ ತಂದೆಯ ಕುರಿತು ಟ್ವಿಸ್ಟ್ ವೊಂದು ದೊರೆತಿದೆ.

ಹೌದು.. ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಮಗಳನ್ನು ಸ್ವಂತ ತಂದೆ ಹಾಗೂ ಆತನ ಕುಟುಂಬದ ಸದಸ್ಯರು ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ಭಾನುವಾರ ನಡೆದಿತ್ತು.

ಮಾನ್ಯಾ ಮತ್ತು ವಿವೇಕಾನಂದ ಇಬ್ಬರೂ ಹುಬ್ಬಳ್ಳಿ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದಾಗ ಇನ್ಸ್ಟಾಗ್ರಾಂ ಮೆಸೆಜ್‍ನಿಂದ ಪ್ರೀತಿ ಹುಟ್ಟಿತ್ತು. ಈ ವಿಚಾರ ಎರಡೂ ಕುಟುಂಬಕ್ಕೂ ತಿಳಿದಿತ್ತು. ಇಬ್ಬರ ಪ್ರೀತಿಗೆ ಯುವತಿಯ ಕುಟುಂಬಸ್ಥರು ವಿರೋಧಿಸಿದ್ದರು.

ಯುವತಿ ಯಾವುದೇ ಕಾರಣಕ್ಕೂ ವಿವೇಕಾನಂದನನ್ನು ಬಿಟ್ಟು ಬದುಕೋದಿಲ್ಲ ಅಂತ ಹಠ ಹಿಡಿದಿದ್ದಳಂತೆ. ವಿವೇಕಾನಂದ ಮಾನ್ಯಾಳ ಜೊತೆ ಕಳೆದ ಜೂ.19 ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ಮದುವೆಯಾಗಿದ್ದ. ಈ ಸಮಯದಲ್ಲಿ ಪೊಲೀಸರು ಎರಡು ಕುಟುಂಬ ಕರೆದು ರಾಜಿ ಪಂಚಾಯತಿ ಮಾಡಿದ್ದರು ಎನ್ನಲಾಗಿದೆ.

ಮುದ್ದಿನ ಮಗಳನ್ನೇ ಕುರಿ ಕಡಿದಂತೆ ಕಡಿದ ಪಾಪಿ ತಂದೆ

ಸಂತ್ರಸ್ಥೆ ಮಾನ್ಯ ಪಾಟೀಲ್ ಆಕೆಯ ತಂದೆಯ ಮುದ್ದಿನ ಮಗಳಾಗಿದ್ದಳು. ಮಗಳನ್ನು ಇಂಜಿನೀಯರ್ ಮಾಡಿ ಅಮೇರಿಕಕ್ಕೆ ಕಳುಹಿಸೋ ಚಿಂತನೆ ತಂದೆಯದಾಗಿತ್ತು. ಆದ್ರೆ ಮುದ್ದಿನ ಮಗಳು ಗ್ರಾಮದ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಳು.

ಅಷ್ಟೇ ಅಲ್ಲ, ಹೆತ್ತವರ ವಿರೋಧ ನಡುವೆ ಮನೆಬಿಟ್ಟು ಓಡಿಹೋಗಿ ಮದುವೆಯಾಗಿದ್ದಳು. ಏಳು ತಿಂಗಳು ಬಿಟ್ಟು ಊರಿಗೆ ಬಂದಿದ್ದ ಮಗಳನ್ನು ಹೆತ್ತ ತಂದೆಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ ತಂದೆ

ಇನ್ನು ಮಾನ್ಯ ಹತ್ಯೆ ಕುರಿತಂತೆ ಮಾನ್ಯಾಳ ಪತಿ ವಿವೇಕಾನಂದ ಸ್ಫೋಟಕ ಹೇಳಿಕೆ ನೀಡಿದ್ದು, ತಮ್ಮ ಪತ್ನಿಯನ್ನು ಆಕೆಯ ತಂದೆಯೇ ಕೊಲೆ ಮಾಡಿದ್ದು, ಆತನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಅಂತೆಯೇ ಮಾನ್ಯಾಳ ತಂದೆ ಹಿಂದೆ ಹಿಂದೆ ಮುಸ್ಲಿಂ ಹುಡುಗಿಯೊಬ್ಬರನ್ನು ಪ್ರೀತಿಸಿದ್ದರು. ಆವಾಗ ಅವರಿಗೆ ಜಾತಿ ಮುಖ್ಯವಾಗಿರಲಿಲ್ಲ. ಆದರೆ, ಈಗ ತಮ್ಮ ಮಗಳು ಬೇರೆ ಜಾತಿಯ ಹುಡುಗನನ್ನು ಮದುವೆಯಾಗಿದ್ದು ತಪ್ಪಾಯ್ತಾ.. ಅವರಿಗೆ ನಮ್ಮ ಪ್ರೀತಿಗಿಂತ ಜಾತಿಯೇ ದೊಡ್ಡದಾಗಿದೆ ಎಂದು ವಿವೇಕಾನಂದ ಪ್ರಶ್ನಿಸಿದ್ದಾರೆ.

ಏನಿದು ಘಟನೆ?

ಇನಾಂ ವೀರಾಪೂರ ಗ್ರಾಮದ ಮಾನ್ಯಾ ಎಂಬ ಯುವತಿ ಅದೇ ಗ್ರಾಮದ ವಿವೇಕಾನಂದ ದೊಡ್ಡಮನಿ ಎಂಬ ದಲಿತ ಯುವಕನನ್ನು ಕುಟುಂಬದ ವಿರೋಧದ ನಡುವೆಯೂ ಮೇ ತಿಂಗಳಲ್ಲಿ ಮದುವೆಯಾಗಿದ್ದರು. ಮದುವೆಯ ನಂತರ ಪ್ರಾಣಭಯದಿಂದ ಹಾವೇರಿಯಲ್ಲಿ ನೆಲೆಸಿದ್ದ ದಂಪತಿ, ಇತ್ತೀಚೆಗೆ ತಮ್ಮ ಸ್ವಗ್ರಾಮಕ್ಕೆ ಮರಳಿ ವೈವಾಹಿಕ ಜೀವನ ನಡೆಸುತ್ತಿದ್ದರು.

ಭಾನುವಾರ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವಿವೇಕಾನಂದ ಹಾಗೂ ಅವರ ತಂದೆಯ ಮೇಲೆ ಮಾನ್ಯಾಳ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಳಿಕ ಯುವಕನ ಮನೆಗೆ ತೆರಳಿ ಮಾನ್ಯಾ, ವಿವೇಕಾನಂದನ ತಾಯಿ ರೇಣವ್ವ ಸೇರಿದಂತೆ ಕುಟುಂಬದ ಇತರ ಸದಸ್ಯರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಕುಟುಂಬದ ಮರ್ಯಾದೆ ಹಾಳು ಮಾಡಿದ್ದಾಳೆ ಎಂಬ ಕಾರಣಕ್ಕೆ ಆರು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಾಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದ್ದು, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ನಗರದ ವಿವೇಕಾನಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಾನ್ಯಾ ಹಾಗೂ ಅವರ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *