ಹಂಪಿಯ ಕಳಪೆ ನಿರ್ವಹಣೆ: ASI, ಜಿಲ್ಲಾಡಳಿತ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗರಂ!

ಹಂಪಿ: ಯನೆಸ್ಕೋ ವಿಶ್ವ ಪರಂಪರೆಯ ತಾಣ ಹಂಪಿಯ ಕಳಪೆ ನಿರ್ವಹಣೆ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI)ಮತ್ತು ಜಿಲ್ಲಾಡಳಿತದ ವಿರುದ್ಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಹಂಪಿಯ ಐತಿಹಾಸಿಕ ಕೋದಂಡರಾಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮಾರ್ಗ ಮಧ್ಯದಲ್ಲಿ ಮಾನವ ತ್ಯಾಜ್ಯ (ಮಲ) ಸೇರಿದಂತೆ ಅನೈರ್ಮಲ್ಯ ವಾತಾವರಣ ಕಂಡು ಗರಂ ಆಗಿದ್ದಾರೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣದ ಸ್ವಚ್ಛತೆ ಮತ್ತು ಒಟ್ಟಾರೆ ನಿರ್ವಹಣೆ ಕುರಿತು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾಕಷ್ಟು ನೈರ್ಮಲ್ಯ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಪಾರಂಪರಿಕ ಪ್ರದೇಶದಲ್ಲಿ ಎಷ್ಟು ಶೌಚಾಲಯಗಳಿವೆ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ. ಇಂತಹ ಪರಿಸ್ಥಿತಿ ನನಗೆ ಸಹಿಸಲು ಆಗುತ್ತಿಲ್ಲ. ಇನ್ನೂ ಪ್ರತಿದಿನ ಬರುವ ಸಾವಿರಾರು ಪ್ರವಾಸಿಗರು ಮತ್ತು ಪ್ರವಾಸಿಗರ ಪರಿಸ್ಥಿತಿ ಇನ್ನೂ ಹೇಗಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಹಂಪಿ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ, ASI ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಳ್ಳದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸೀತಾರಾಮನ್ ಅವರ ಭೇಟಿಯು ಭಾರತದ ಪ್ರಮುಖ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯ ನಿರ್ವಹಣೆ, ನೈರ್ಮಲ್ಯ ಮತ್ತು ಸಂರಕ್ಷಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ಮತ್ತು ಪಾಲುದಾರರಲ್ಲಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡು ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *