ಟ್ರಾಫಿಕ್ ಫೈನ್ 50% ಡಿಸ್ಕೌಂಟ್‌ಗೆ ಭರ್ಜರಿ ರೆಸ್ಪಾನ್ಸ್: 100 ಸಂಚಾರ ನಿಯಮ ಉಲ್ಲಂಘಿಸಿ ಒಂದೇ ಸಾರಿ 27 ಸಾವಿರ ಪಾವತಿಸಿದ ಬೈಕ್ ಸವಾರ!
ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಯ ಶೇ. 50ರಷ್ಟು ರಿಯಾಯಿತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮೊದಲ ಎರಡು ದಿನಗಳಲ್ಲೇ 2.24 ಕೋಟಿಗೂ ಅಧಿಕ ದಂಡ ಸಂಗ್ರಹವಾಗಿದೆ.ಅದರಲ್ಲೂ ವಿಶೇಷವೆಂದರೆ. ರಾಜಾಜಿನಗರದಲ್ಲಿ ವಿದ್ಯಾರ್ಥಿಯಾಗಿರುವ ಬೈಕ್ ಸವಾರನೊಬ್ಬ ಈ ಅವಕಾಶವನ್ನು ಬೊಂಬಾಟ್ ಆಗಿ ಉಪಯೋಗಿಸಿಕೊಂಡಿದ್ದು, ತನ್ನ ಬೈಕಿನ 100 ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಕೇಸ್‌ಗಳಿಗೆ ಒಮ್ಮೆಗೆ 27,500 ದಂಡ ಪಾವತಿಸಿ ಗಮನ ಸೆಳೆದಿದ್ದಾನೆ. ಇನ್ನು, ಜುಲೈ 10ರವರೆಗೆ ಈ ರಿಯಾಯಿತಿ ಲಭ್ಯವಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವಿಶೇಷ ಕೌಂಟರ್‌ಗಳು ಹಾಗೂ ಆನ್‌ಲೈನ್ ಆಪ್‌ಗಳ ಮೂಲಕ ಪಾವತಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಹೈಲೈಟ್ಸ್:
- ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ಫೈನ್‌ನಲ್ಲಿ ಶೇ.50ರಷ್ಟು ರಿಯಾಯಿತಿಗೆ ಭರ್ಜರಿ ರೆಸ್ಪಾನ್ಸ್
- 100 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿ 27,500 ರೂ. ದಂಡ ಕಟ್ಟಿದ ಬೈಕ್ ಸವಾರ
- 2 ದಿನದಲ್ಲೇ ಸಂಗ್ರಹವಾಯ್ತು 2 ಕೋಟಿ ದಂಡ
- ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ದಂಡ ಪಾವತಿಗೆ ವಿಶೇಷ ಕೌಂಟರ್ ಓಪನ್, ಆನ್‌ಲೈನ್‌ನಲ್ಲಿ ದಂಡ ಪಾವತಿ ಹೇಗೆ?
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಯಲ್ಲಿ ಶೇ. 50ರಷ್ಟು ರಿಯಾಯಿತಿಗೆ ಭರ್ಜರಿ ಸ್ಪಂದನೆ ವ್ಯಕ್ತವಾಗಿದ್ದು, ಎರಡು ದಿನಗಳಲ್ಲಿ ನಗರ ಸಂಚಾರ ಪೊಲೀಸ್ ವಿಭಾಗಕ್ಕೆ 2.24 ಕೋಟಿ ರೂ. ದಂಡ ಸಂದಾಯವಾಗಿದೆ.
ಜೂ.21 ಹಾಗೂ ಸೋಮವಾರ(ಜೂ.22) ನಗರದಾದ್ಯಂತ ವಾಹನ ಸವಾರರು 75,487 ಸಂಚಾರ ನಿಯಮಗಳ ಉಲ್ಲಂಘನೆಗೆ ಶೇ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಿದ್ದಾರೆ. ಒಟ್ಟು 2,24,70,450 ರೂ. ದಂಡ ಸಂಗ್ರಹವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಆಫರ್ ಬಳಸಿ ದಂಡ ಕಟ್ಟಿದ 100 ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರ!
ದಂಡ ರಿಯಾಯಿತಿ ಸದುಪಯೋಗ ಮಾಡಿಕೊಂಡಿರುವ ಬೈಕ್ ಸವಾರರೊಬ್ಬರು, ತಮ್ಮ ಬೈಕ್‌ಗೆ ಸಂಬಂಧಿಸಿದ 100 ಉಲ್ಲಂಘನೆ ಪ್ರಕರಣಗಳಿಗೆ ದಂಡ ಕಟ್ಟಿದ್ದಾರೆ. ರಾಜಾಜಿನಗರ ಸಂಚಾರ ಠಾಣೆಗೆ ಆಗಮಿಸಿದ್ದ ಬೈಕ್ ಸವಾರ ಒಟ್ಟು 27,500 ರೂ.ದಂಡ ಪಾವತಿಸಿದ್ದಾರೆ.
ದಂಡ ಕಟ್ಟಿರುವ ಸವಾರನು ವಿದ್ಯಾರ್ಥಿಯಾಗಿದ್ದು, ಹೆಲ್ಮೆಟ್ ರಹಿತ ಚಾಲನೆ ಸೇರಿದಂತೆ ವಿವಿಧ ಮಾದರಿಯ 100 ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ. ಈಗ ರಿಯಾಯಿತಿ ಇರುವುದನ್ನು ಅರಿತು ದಂಡ ಪಾವತಿಸಿದ್ದಾನೆ. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಜೂನ್ 21ರಿಂದ ಜುಲೈ 10ರವರೆಗೆ ಶೇ. 50ರಷ್ಟು ರಿಯಾಯಿತಿ ದರದಲ್ಲಿ ವಾಹನ ಸವಾರರು ದಂಡ ಪಾವತಿಸಲು ಅವಕಾಶವಿದ್ದು, ವಾಹನ ಸವಾರರು ಇದರ ಅನುಕೂಲ ಪಡೆಯಬಹುದು.
ಪ್ರಮುಖ ಮಾರ್ಗಗಳಲ್ಲಿ ದಂಡ ಪಾವತಿಗೆ ವಿಶೇಷ ಕೌಂಟರ್ ಆರಂಭ
ಈ ನಡುವೆ, ದಂಡ ಪಾವತಿಸುವ ವಾಹನ ಸವಾರರಿಗೆ ಅನುಕೂಲವಾಗುವಂತೆ ಹೆಣ್ಣೂರು ಜಂಕ್ಷನ್, ರಿಂಗ್ ರಸ್ತೆ, ದೇವಸಂದ್ರ ಜಂಕ್ಷನ್, ಹಳೇ ಮದ್ರಾಸ್ ರಸ್ತೆ, ಕುಂದಲಹಳ್ಳಿ ಜಂಕ್ಷನ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್, ಮೈಸೂರು ರಸ್ತೆಯ ಬಿಎಚ್‌ಇಎಲ್ ಮೆಟ್ರೊ ಜಂಕ್ಷನ್, 12 ನೇ ಮುಖ್ಯರಸ್ತೆ ಆರ್‌ಟಿಒ ಕಚೇರಿ ಬಳಿ, ಜಾಲಹಳ್ಳಿ ಕ್ರಾಸ್ ಜಂಕ್ಷನ್, ಹೆಬ್ಬಾಳ ಜಂಕ್ಷನ್, ಸಾಗರ ಜಂಕ್ಷನ್, ಎಲೆಕ್ಟ್ರಾನಿಕ್ ಸಿಟಿ ರಸ್ತೆಯ ಹೊಸೂರು ರಸ್ತೆ ಜಂಕ್ಷನ್, ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಜಂಕ್ಷನ್ ಬಳಿ ವಿಶೇಷ ಕೌಂಟರ್‌ಗಳನ್ನು ಆರಂಭಿಸಲಾಗಿದೆ. ವಿಶೇಷ ಕೌಂಟರ್‌ಗಳಲ್ಲಿ ಸಂಚಾರ ಪೊಲೀಸರು ದಂಡ ಪಾವತಿಗೆ ಅವಕಾಶ ಮಾಡಿಕೊಡಲಿದ್ದಾರೆ.
ವೆಬ್‌ಸೈಟ್‌ನಲ್ಲೂಅವಕಾಶ
ಅಷ್ಟೇ ಅಲ್ಲದೆ, ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್, ನಗರ ಸಂಚಾರ ಪೊಲೀಸ್ ವಿಭಾಗದ ಸಂಚಾರ ನಿರ್ವಹಣಾ ಕೇಂದ್ರ, ಕರ್ನಾಟಕ ಒನ್ ವೆಬ್‌ಸೈಟ್ ಮುಖಾಂತರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿಯೂ ದಂಡ ಪಾವತಿಸಬಹುದಾಗಿದೆ.
