ನಾಟಕೀಯ ರಕ್ಷಣಾ ಕಾರ್ಯ ಮಾಡಿದ್ದಕ್ಕೆ ಶಿಕ್ಷೆ: ಜೇವರ್ಗಿ PSI ಮಲ್ಲಣ್ಣ ಯಲಗೊಂಡ ಸಸ್ಪೆಂಡ್
ನಾಟಕೀಯ ರಕ್ಷಣಾ ಕಾರ್ಯ ನಡೆಸಿದ್ದ ನೆಲೋಗಿ ಪಿಎಸ್ಐ ಮಲ್ಲಣ್ಣ ಯಲಗೊಂಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಕಲಬುರಗಿ: ‘ಸಿಂಗಂ’ ಸಿನಿಮಾ ರೀತಿ ಬಿಲ್ಡಪ್ ಕೊಟ್ಟಿದ್ದ ನೆಲೋಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಲ್ಲಣ್ಣ ಯಲಗೊಂಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಭೀಮಾ ಪ್ರವಾಹದಲ್ಲಿ ಜನರು ಮನೆ, ಬೆಳೆ ಕಳೆದುಕೊಂಡು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯ ಪಿಎಸ್ಐ ಯಲಗೊಂಡ ನಾಟಕೀಯ ರಕ್ಷಣಾ ಕಾರ್ಯ ನಡೆಸಿರುವ ಬಗ್ಗೆ ವಿಡಿಯೋಗಳು ವೈರಲ್ ಆಗಿದ್ದವು.
ಜನರು ಸಂಕಷ್ಟದಲ್ಲಿರುವಾಗ ಈ ರೀತಿ ಮಾಡಿದ್ದು ಸರಿಯಲ್ಲ. ಹಾಗಾಗಿ, ಅವರನ್ನು ಅಮಾನತು ಮಾಡಲಾಗಿದೆ. ಜೇವರ್ಗಿ ಪಿ.ಎಸ್.ಐ ಸಂಗಮೇಶ ಅವರಿಗೆ ನೆಲೋಗಿ ಠಾಣೆ ಹೆಚ್ಚುವರಿ ಹೊಣೆ ನೀಡಲಾಗಿದೆ.
ಈ ಹಿಂದೆ ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ ವೇಳೆ ಸಾಮಾಜಿಕ ಅಂತರ ಪ್ರಜ್ಞೆ ಮರೆತು ಇದೇ ಪೊಲೀಸ್ ಅಧಿಕಾರಿ ಹುಟ್ಟುಹಬ್ಬಕ್ಕೆ ಕ್ಷೀರಾಭೀಷೇಕ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಜವಾಬ್ದಾರಿ ಮರೆತು ಈ ರೀತಿ ನಡೆದುಕೊಂಡ ಯಲಗೊಂಡ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಅಮಾನತು ಅವಧಿ ಮುಗಿದ ಬಳಿಕ ಬಳಿಕ ಇದೇ ಠಾಣೆಗೆ ಸೇವೆಗೆ ನಿಯೋಜಿಸಲಾಗಿತ್ತು.