ನ.20ಕ್ಕೆ ಬಹುನಿರೀಕ್ಷಿತ ‘Act 1978’ ಸಿನಿಮಾ ಥಿಯೇಟರ್‌ನಲ್ಲೇ ರಿಲೀಸ್! ಸಿನಿಪ್ರಿಯರಿಗೆ ಗುಡ್ ನ್ಯೂಸ್
ಲಾಕ್‌ಡೌನ್ ಸಡಿಲಿಕೆ ಬಳಿಕ ಬಿಡುಗಡೆ ಆಗುತ್ತಿರುವ ದಕ್ಷಿಣ ಭಾರತದ ಮೊದಲ ಹೊಸ ಚಿತ್ರ ಎಂಬ ಖ್ಯಾತಿಗೆ ‘Act 1978’ ಪಾತ್ರವಾಗುತ್ತಿದೆ. ಟ್ರೇಲರ್‌ನಿಂದ ಗಮನ ಸೆಳೆದಿರುವ ಈ ಸಿನಿಮಾ ಮೇಲೆ ಸಿನಿಪ್ರಿಯರು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಕೊರೊನಾ ವೈರಸ್ ಭಯದಿಂದಾಗಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂದು ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳ ನಿರ್ಮಾಪಕರೇ ತಮ್ಮ ಸಿನಿಮಾ ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ‘Act 1978’ ಚಿತ್ರತಂಡ ಧೈರ್ಯವಾಗಿ ಇಂಥ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಥಿಯೇಟರ್‌ನಲ್ಲೇ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ದೇಶಕ
ಮಂಸೋರೆ, ನಿರ್ಮಾಪಕ ದೇವರಾಜ್ ಆರ್. ತೀರ್ಮಾನಿಸಿದ್ದಾರೆ.
‘ಹಿರಿಯರು, ಕಿರಿಯರು, ಚಿತ್ರರಂಗದ ಒಳಗೆ, ಹೊರಗೆ, ಅನುಭವಿಗಳು, ಯುವಕರು, ಮಹಿಳೆಯರು, ಪತ್ರಕರ್ತರು, ಥಿಯೇಟರುಗಳ ಮಾಲೀಕರು, ಹೀಗೆ ಸಾಧ್ಯವಾದ ವಲಯದಲ್ಲೆಲ್ಲಾ ಚರ್ಚೆ ಮಾಡಿ ಕೊನೆಗೂ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್ 20 ರಂದು ನಮ್ಮ ಸಿನಿಮಾ ಥಿಯೇಟರ್‌ನಲ್ಲಿ ತೆರೆಕಾಣಲಿದೆ. ನೂರಾರು ಜನರ ಶ್ರಮ, ನಮ್ಮೆಲ್ಲರ ಕನಸು ನಿಮ್ಮ ಮುಂದೆ ಬರಲಿದೆ. ಈ ಸಿನಿಮಾ ತೆರೆಗೆ ಬರುವುದು ಬರೀ ಸಿನಿಮಾವಾಗಿ ಮಾತ್ರವಲ್ಲ, ಸಾವಿರಾರು ಮಂದಿ ಸಿನಿಮಾ ಕುಟುಂಬದ ಭರವಸೆಯ ನಿರೀಕ್ಷೆಯಂತೆ ಇದು ತೆರೆಕಾಣುತ್ತಿದೆ. ಇದರ ಫಲಿತಾಂಶದ ಮೇಲೆ ಸಾವಿರಾರು ಮಂದಿ ಕಾರ್ಮಿಕರು ಮುಂದಿನ ದಿನಗಳ ಭವಿಷ್ಯದ ಕುರಿತು ಇರುವ ಆತಂಕದ ಕಾರ್ಮೋಡ ಸರಿಯುವುದೆಂಬ ನಿರೀಕ್ಷೆಯಲ್ಲಿ ಈ ಸಿನಿಮಾದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ. ಪ್ರೇಕ್ಷಕ ಪ್ರಭುಗಳು ಆ ಕಾರ್ಮೋಡವನ್ನು ಸರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾನು ಹಾಗೂ ನಮ್ಮ ತಂಡ ಇದೆ’ ಎಂದು ಎಂದಿದ್ದಾರೆ ಮಂಸೋರೆ.
ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ‘ಸಂಚಾರಿ’ ವಿಜಯ್, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಅವಿನಾಶ್, ಶ್ರುತಿ, ದತ್ತಣ್ಣ, ಪ್ರಮೋದ್ ಶೆಟ್ಟಿ, ಬಿ. ಸುರೇಶ, ಶೋಭರಾಜ್, ರಾಘು ಶಿವಮೊಗ್ಗ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಟ್ರೇಲರ್ ನೋಡಿದ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ. ಚಿತ್ರ ಕೂಡ ಜನಮನ ಗೆಲ್ಲಲಿದೆ ಎಂಬ ಆತ್ಮವಿಶ್ವಾಸದಲ್ಲಿ ‘Act 1978’ ಥಿಯೇಟರ್‌ನಲ್ಲಿ ಪ್ರದರ್ಶನ ಆರಂಭಿಸಲಿದೆ.