ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ಪತ್ನಿ ಕಾರು ಜಪ್ತಿ!
ಕಲಬುರ್ಗಿ; ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಶಾಸಕರೊಬ್ಬರ ಪತ್ನಿಯ ಕಾರು ಸೀಜ್ ಮಾಡಿದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ. ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ದಿಢೀರ್ ದಾಳಿ ನಡೆಸಿರುವ ಮಹಾರಾಷ್ಟ್ರದ ಸೋಲಾಪುರ ಸಿಸಿಬಿ ಪೊಲೀಸರು, 38.44 ಲಕ್ಷ ರೂಪಾಯಿ ನಗದು, ಎರಡು ಕಾರು, ಲ್ಯಾಪ್ ಟಾಪ್, ಮೊಬೈಲ್ ಮತ್ತಿತರ ವಸ್ತು ವಶಕ್ಕೆ ಪಡೆದಿದ್ದಾರೆ.
ಐಪಿಎಲ್ ಟಿ-20 ಫೈನಲ್ ಪಂದ್ಯ ಮುಕ್ತಾಯವಾಗಿದೆ. ಆದರೆ ಐಪಿಎಲ್ ಪಂದ್ಯಾವಳಿ ವೇಳೆ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ಕಲಬುರ್ಗಿ ನಗರದಲ್ಲಿ ದಾಳಿ ಮಾಡಿರುವ ಸೋಲಾಪುರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅದೆಲ್ಲಕ್ಕಿಂತಲೂ ಮುಖ್ಯವಾಗಿ ಶಾಸಕರೊಬ್ಬರ ಪತ್ನಿಯ ಹೆಸರಲ್ಲಿರುವ ಕಾರನ್ನೂ ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ಪತ್ನಿ ಜಯಶ್ರೀ ಮತ್ತಿಮೋಡ ಹೆಸರಿನಲ್ಲಿದ್ದ ಕಾರನ್ನು ಸೋಲಾಪುರ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಗಳ ನಡುವೆ ನಡೆದ ಐಪಿಎಲ್ ಎರಡನೆಯ ಕ್ವಾಲಿಫೈಯರ್ ಪಂದ್ಯದ ವೇಳೆ ಬೆಟ್ಟಿಂಗ್ ನಡೆದಿತ್ತು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಸೋಲಾಪುರ ಪಟ್ಟಣದಲ್ಲಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು, ಚೇತನ್ ಬನ್ಸಾಲ್, ವಿಘ್ನೇಶ್ ಎಂಬ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರು ನೀಡಿದ ಸುಳಿವಿನ ಮೇರೆಗೆ ಕಲಬುರ್ಗಿ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದರು.
ಖಚಿತ ಮಾಹಿತಿ ಆಧರಿಸಿ ಎಂ.ಬಿ.ನಗರ ಠಾಣೆ ವ್ಯಾಪ್ತಿಯಲ್ಲಿ ಬರೋ ಮನೆಯೊಂದರ ಮೇಲೆ ದಾಳಿ ಮಾಡಿದ ಸೋಲಾಪುರ ಸಿಸಿಬಿ ಪೊಲೀಸರು ಬೆಟ್ಟಿಂಗ್ ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅತುಲ್ ಶಿರಶೆಟ್ಟಿ ಹಾಗೂ ಪ್ರದೀಪ್ ಕಾರಂಜೆ ಎಂದು ಗುರುತಿಸಲಾಗಿದೆ. ಈ ವೇಳೆ ಜಯಶ್ರೀ ಮತ್ತಿಮೂಡ ಹೆಸರಿನಲ್ಲಿರುವ ಇನ್ನೋವಾ ಕ್ರಿಸ್ಟಾ ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 38.44 ಲಕ್ಷ ರೂಪಾಯಿ ನಗದು, ನಾಲ್ಕು ಲ್ಯಾಪ್ ಟಾಪ್ ಗಳು, ಟಿ.ವಿ. ವಶಕ್ಕೆ ಪಡೆದಿದ್ದಾರೆ.
ಎರಡು ಕಾರು ಹಾಗೂ ಒಂದು ಸ್ಕೂಟರ್ ಸಹ ಜಪ್ತಿ ಮಾಡಿದ್ದಾರೆ. ವಶಕ್ಕೆ ಪಡೆದ ಕಾರಿನ ಪೈಕಿ ಕೆಎ 51, ಎಂ.ಪಿ. 9955 ನೋಂದಣಿಯ ಕಾರು ಶಾಸಕರ ಪತ್ನಿಯ ಹೆಸರಿನಲ್ಲಿದೆ. ಸೋಲಾಪುರ ಹಾಗೂ ಕಲಬುರ್ಗಿ ಸೇರಿ ಒಟ್ಟು ನಾಲ್ಕು ಲ್ಯಾಪ್ ಟಾಪ್, 13 ಮೊಬೈಲ್ ಫೋನ್, ಬೆಂಟ್ಟಿಂಗ್ ದಂಧೆಗೆ ಬಳಸುತ್ತಿದ್ದ ಯಂತ್ರೋಪಕರಣಗಳನ್ನೂ ವಶಪಡಿಸಿಕೊಂಡಿರೋದಾಗಿ ಸಿಸಿಬಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಟ್ಟಿಂಗ್ ನಲ್ಲಿ ಇನ್ನೂ ಹಲವು ಜನರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಜಯಶ್ರೀ ಮತ್ತಿಮೂಡ ಸಂಬಂಧಿ ಗೋರಖನಾಥ್ ಹೆಸರೂ ಬೆಟ್ಟಿಂಗ್ ಪ್ರಕರಣದಲ್ಲಿ ಕೇಳಿಬಂದಿದ್ದು, ಆತ ತಲೆನರೆಸಿಕೊಂಡಿದ್ದಾನೆ. ಶಂಕಿತರ ಬಂಧನಕ್ಕೆ ಶೋಧ ಕಾರ್ಯ ಆರಂಭಗೊಂಡಿದೆ. ಕಲಬುರ್ಗಿ ಪೊಲೀಸರ ಗಮನಕ್ಕೂ ಬಾರದಂತೆ ಕ್ಷಿಪ್ರ ಕಾರ್ಯಾಚರಣೆ ನಡೆಸಿರೋ ಸೋಲಾಪುರ ಸಿಸಿಬಿ ಪೊಲೀಸರು, ಬಂಧಿತರನ್ನು ಸೋಲಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.