Karnataka Weather: ನಿವಾರ್ ಚಂಡಮಾರುತದ ಎಫೆಕ್ಟ್​; ಕರ್ನಾಟಕದ 7 ಜಿಲ್ಲೆಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಣೆ

ಬೆಂಗಳೂರು : ನಿನ್ನೆ ರಾತ್ರಿ 2 ಗಂಟೆ ವೇಳೆಗೆ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಇದರ ಪರಿಣಾಮದಿಂದ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದಕ್ಕಾಗಿ ಈಗಾಗಲೇ ಕರ್ನಾಟಕ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಮುಖ್ಯವಾಗಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ನಿವಾರ್ ಚಂಡಮಾರುತದ ಪರಿಣಾಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಇಂದು ಕರ್ನಾಟಕದ 7 ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಹಳದಿ ಅಲರ್ಟ್​ ಘೋಷಿಸಿದೆ.

ಕರ್ನಾಟಕದ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ತಮಿಳುನಾಡು, ಪುದುಚೆರಿಯಲ್ಲಿ ನಿನ್ನೆಯಿಂದ ನಿವಾರ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಇದರ ಪರಿಣಾಮ ತಮಿಳುನಾಡಿನ ನೆರೆಯ ರಾಜ್ಯಗಳಾದ ಕರ್ನಾಟಕ, ಕೇರಳ, ಆಂಧ್ರ ಪ್ರದೇಶದ ಮೇಲೂ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭೀಕರ ನಿವಾರ್ ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈಗೆ ತೆರಳುವ ಹಲವು ಬಸ್, ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ನಿವಾರ್ ಚಂಡಮಾರುತ ಅಪ್ಪಳಿಸಿದೆ. ಭೀಕರ ನಿವಾರ್ ಚಂಡಮಾರುತದ ಪರಿಣಾಮದಿಂದ ತಮಿಳುನಾಡಿನಲ್ಲಿ ಸರ್ಕಾರಿ ರಜೆ ಘೋಷಿಸಲಾಗಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದಲ್ಲಿ ನಿವಾರ್ ಚಂಡಮಾರುತದ ಪ್ರಭಾವ ಹೆಚ್ಚಾಗಿರಲಿದೆ ಎನ್ನಲಾಗಿದೆ. ಇದುವರೆಗೂ ಪುದುಚೆರಿಯಲ್ಲಿ ಸುಮಾರು 1 ಸಾವಿರ ಜನಹಾಗೂ ತಮಿಳುನಾಡಿನಲ್ಲಿ 1 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕರ್ನಾಟಕದ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆಯಿದೆ. ಹೀಗಾಗಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರಂ, ಜಯನಗರ ಸೇರಿದಂತೆ ಹಲವೆಡೆ ನಿನ್ನೆ ರಾತ್ರಿ ತುಂತುರು ಮಳೆಯಾಗಿದೆ. ಇಂದು ಕೂಡ ಬೆಂಗಳೂರು ನಗರ, ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ಲಭ್ಯವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದಲ್ಲಿ ನಿವಾರ್ ಚಂಡಮಾರುತದ ಪರಿಣಾಮದಿಂದ ಅಲ್ಲಲ್ಲಿ ಮಳೆಯಾಗಿದೆ. ಹೊರವಲಯದ ದಾಸರಹಳ್ಳಿ, ಮಲ್ಲಸಂದ್ರ, ಬಾಗಲಗುಂಟೆ ಸುತ್ತಮುತ್ತ ಜಿಟಿಜಿಟಿ ಮಳೆಯಾಗಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *