ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಯತ್ನ

ಶುಕ್ರವಾರ ಸಂಜೆ 7:30ರ ವೇಳೆ ಡಾಲರ್ಸ್ ಕಾಲನಿಯಲ್ಲಿರುವ ನಿವಾಸದಲ್ಲಿ ಎನ್ ಆರ್ ಸಂತೋಷ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ನಿದ್ರಾಮಾತ್ರೆ ಸೇವಿಸಿರುವುದು ತಿಳಿದುಬಂದಿದೆ. ಆತ್ಮಹತ್ಯೆಯತ್ನಕ್ಕೆ ಕಾರಣ ಏನು ಎಂದು ಗೊತ್ತಾಗಿಲ್ಲ.

ಬೆಂಗಳೂರು(ನ. 28): ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನಿನ್ನೆ ಶುಕ್ರವಾರ ರಾತ್ರಿ 7:30ರ ವೇಳೆ ಡಾಲರ್ಸ್ ಕಾಲನಿಯಲ್ಲಿರುವ ನಿವಾಸದ ತಮ್ಮ ಕೊಠಡಿಯಲ್ಲಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಸಮೀಪದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಸಂತೋಷ್ ಅವರ ಆತ್ಮಹತ್ಯೆಯತ್ನಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ. ಅವರು ನಿದ್ರೆ ಮಾತ್ರೆ ಸೇವಿಸಿದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದಿರಿರುವ ಶಂಕೆ ಇದೆ. ಸದಾಶಿವನಗರ ಮತ್ತು ಸಂಜಯನಗರ ಠಾಣೆಗಳ ಪೊಲೀಸರು ರಾಮಯ್ಯ ಆಸ್ಪತ್ರೆ ಬಳಿ ಪರಿಶೀಲನೆ ನಡೆಸಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಅವರೂ ಕೂಡ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ನನ್ನ ಜೊತೆ ಮುಕ್ಕಾಲು ಗಂಟೆ ವಾಕ್ ಮಾಡಿದ್ದ. ಖುಷಿ ಖುಷಿಯಾಗಿ ನಗುನಗುತ್ತ ಚೆನ್ನಾಗಿ ಇದ್ದ ಎಂದು ಹೇಳಿದ ಯಡಿಯೂರಪ್ಪ, ಅವನ ಪತ್ನ ಜೊತೆ ನಾನು ಮಾತಾಡಿದೀನಿ, ಯಾವುದೇ ಆತಂಕ ಇಲ್ಲ. ಬೆಳಗ್ಗೆ ಎದ್ದು ಓಡಾಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ನಿ ಹೇಳಿಕೆ: ಕೌಟುಂಬಿಕವಾಗಿ ನಾವು ತುಂಬಾ ಚೆನ್ನಾಗಿದ್ದೇವೆ. ಅವರು ಬೆಳಗ್ಗೆಯಿಂದ ಬೇಜಾರಿನಲ್ಲಿದ್ದರು. ಸಂಜೆ ಹೊರಗಡೆ ಹೋಗಿ 7 ಗಂಟೆಗೆ ಮನೆಗೆ ಬಂದರು. ಊಟಕ್ಕೆ ಏನು ಮಾಡಲಿ ಎಂದು ಕೇಳಲು ಹೋದಾಗ ಪ್ರಜ್ಞೆ ತಪ್ಪಿರುವುದು ಕಂಡುಬಂತು. ಕೂಡಲೇ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದೆವು. ರಾಜ್ಯದಲ್ಲಿ ಪೊಲಿಟಿಕಲ್ ಇನ್​ಬ್ಯಾಲೆನ್ಸ್ ಆಗಿದ್ದನ್ನ ಅವರು ಮನಸಿಗೆ ತೆಗೆದುಕೊಂಡಿದ್ದರು. ಬೇಗ ಹುಷಾರಾಗುತ್ತಾರೆ ಎಂದು ವೈದ್ಯರು ಹೇಳಿದ್ಧಾರೆ ಎಂದು ಎನ್.ಆರ್. ಸಂತೋಷ್ ಅವರ ಪತ್ನಿ ಜಾಹ್ನವಿ ಹೇಳಿದ್ದಾರೆ.

ಸಂತೋಷ್ ಅವರು ಯಡಿಯೂರಪ್ಪನವರ ಸಂಬಂಧಿಕರೂ ಹೌದು. ಅವರ ರಾಜಕೀಯ ಕಾರ್ಯದರ್ಶಿಯಾಗಿ ಸಂತೋಷ್ ಅವರು ರಾಜ್ಯ ರಾಜಕೀಯದ ತೆರೆಮರೆಯಲ್ಲಿ ಸಾಕಷ್ಟು ಪಾತ್ರ ವಹಿಸಿದ್ದಾರೆ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸುವ ಆಪರೇಷನ್ ಕಮಲದಲ್ಲೂ ಎನ್.ಆರ್. ಸಂತೋಷ್ ಅವರ ಪಾತ್ರವಿದೆ. ಸಂತೋಷ್ ಅವರು ರಾಜಕೀಯ ವಲಯದಾಚೆ ಸುದ್ದಿಗೆ ಹೆಚ್ಚು ಗ್ರಾಸವಾಗಿದ್ದು ಕೆ.ಎಸ್. ಈಶ್ವರಪ್ಪ ಅವರ ಕಾರ್ಯದರ್ಶಿ ಜೊತೆ ಜಟಾಪಟಿ ಘಟನೆಗಳ ಮೂಲಕ. ಸಂತೋಷ್ ಅವರಿಗೆ ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಕೈತಪ್ಪುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಮನನೊಂದು ಅವರು ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದರಾ ಎಂಬುದು ಗೊತ್ತಾಗಬೇಕಿದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *