ಒಂದೆಡೆ ಹುಲಿ ಭಯ, ಮತ್ತೊಂದೆಡೆ ಚಿರತೆ ಆತಂಕ; ಕಾಫಿತೋಟಕ್ಕೆ ಹೋಗಲು ಹೆದರುತ್ತಿರುವ ಮಲೆನಾಡಿಗರು
ಭಾರತೀಬೈಲು ಗ್ರಾಮದಲ್ಲಿ ಹುಲಿ ಭಯ ಸ್ಥಳೀಯರಿಗೆ ಕಳೆದ ಏಳೆಂಟು ತಿಂಗಳಿಂದ ಕಾಡುತ್ತಿದೆ. ಗ್ರಾಮದ ಅಂಚಿನಲ್ಲಿ ಹಾಗೂ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಲವು ಬಾರಿ ಕಾಣ ಸಿಕ್ಕಿದೆ.
ಚಿಕ್ಕಮಗಳೂರು(ನ.29): ಹುಲಿ ಘರ್ಜನೆಯ ಶಬ್ಧ ಕೇಳಿ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು ಭಯಗೊಂಡು ತೋಟದಿಂದ ಮನೆಗೆ ವಾಪಸ್ ಬಂದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ ತೋಟದ ಕೂಲಿಯಾಳುಗಳು ಎಂದಿನಂತೆ ಊಟ ಮುಗಿಸಿ ಕೆಲಸಕ್ಕೆ ಇಳಿಯುವಾಗ ಮೇಲಿಂದ ಮೇಲೆ ಜೋರಾಗಿ ಹುಲಿ ಘರ್ಜಿಸುವ ಶಬ್ಧ ಕೇಳಿದೆ. ಕೂಲಿ ಕಾರ್ಮಿಕರು ಶಬ್ಧವನ್ನ ಆಲಿಸಿದಾಗ ಮತ್ತೆ ಜೋರಾಗಿ ಹುಲಿ ಘರ್ಜನೆಯ ಶಬ್ಧ ಕೇಳಿದೆ. ಆ ಶಬ್ಧದ ಅಂತರ ಕೂಲಿ ಕಾರ್ಮಿಕರಿಗೆ ತೀರಾ ಸನಿಹ ಎನಿಸಿದ್ದರಿಂದ ತಕ್ಷಣ ಕೂಲಿ ಕಾರ್ಮಿಕರು ಕೆಲಸವನ್ನ ಬಿಟ್ಟು ವಾಪಸ್ ಮನೆಗೆ ಬಂದಿದ್ದಾರೆ.
ಭಾರತೀಬೈಲು ಗ್ರಾಮದಲ್ಲಿ ಹುಲಿ ಭಯ ಸ್ಥಳೀಯರಿಗೆ ಕಳೆದ ಏಳೆಂಟು ತಿಂಗಳಿಂದ ಕಾಡುತ್ತಿದೆ. ಗ್ರಾಮದ ಅಂಚಿನಲ್ಲಿ ಹಾಗೂ ರಸ್ತೆಯಲ್ಲಿ ಹುಲಿಯ ಹೆಜ್ಜೆ ಗುರುತುಗಳು ಹಲವು ಬಾರಿ ಕಾಣ ಸಿಕ್ಕಿದೆ. ಇದರಿಂದ ಭಾರತೀಬೈಲು ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ಹೆಚ್ಚಾಗಿತ್ತು. ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದಲ್ಲಿ ಚಿರತೆ ಭಯ ಸ್ಥಳೀಯರನ್ನ ಕಾಡುತ್ತಿದೆ. ಕಳೆದ ರಾತ್ರಿ ತೋಟದಲ್ಲಿರೋ ಗೊಬ್ಬರ ತಯಾರಿಕಾ ಘಟಕಕ್ಕೆ ಬಂದ ಚಿರತೆ ನಾಯಿ ಮರಿಯೊಂದನ್ನ ಹೊತ್ತೊಯ್ದಿದೆ. ಚಿರತೆ ನಾಯಿಮರಿಯನ್ನ ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋವನ್ನ ಕಂಡ ಸುತ್ತಮುತ್ತಲ್ಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಹಾಗಾಗಿ ಕೂಡಲೇ ಮೂಡಿಗೆರೆ ತಾಲೂಕಿನ ಭಾರತೀಬೈಲು ಗ್ರಾಮದ ಜನ ಹಾಗೂ ಅಜ್ಜಂಪುರ ತಾಲೂಕಿನ ಕಾಟಿಗನೆರೆ ಗ್ರಾಮದ ಜನ ಅರಣ್ಯ ಇಲಾಖೆ ಬೋನಿಟ್ಟು ಹುಲಿ ಹಾಗೂ ಚಿರತೆಯನ್ನ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.