ಇಂದು ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ; ಬಿಜೆಪಿ ಸಂಪೂರ್ಣ ಸಿದ್ದ ಎಂದ ಕಟೀಲ್
ಡಿಕೆಶಿಯವರ ಬಳಿ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ. ಡಿಕೆಶಿ ಸುಳ್ಳು ರಾಜಕಾರಣ ಮಾಡುವುದು ಬೇಡ. ಸಂತೋಷ್ ಗೆ ಈ ಸಂದರ್ಭದಲ್ಲಿ ಸಾಂತ್ವನ, ಧೈರ್ಯ ಹೇಳುವ ಕೆಲಸ ಆಗಬೇಕು. ಇದರಲ್ಲಿ ರಾಜಕಾರಣ ತರೋದು ಸರಿಯಲ್ಲ ಎಂದು ಕಿಡಿಕಾರಿದರು
ಬೆಂಗಳೂರು(ನ.30): ಕೊರೋನಾ ಕಾರಣದಿಂದಾಗಿ ಮುಂದೂಡಲಾಗಿದ್ದ ಬಹು ನಿರೀಕ್ಷಿತ ಗ್ರಾಮ ಪಂಚಾಯತ್ ಚುನಾವಣೆಗೆ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ಇಂದು ಗ್ರಾ.ಪಂ.ಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಬಿಜೆಪಿ ಸನ್ನದ್ಧವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಗ್ರಾಮ ಪಂಚಾಯತ್ ಚುನಾವಣೆಗೆ ವೇಳಾಪಟ್ಟಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಗ್ರಾ.ಪಂ.ಚುನಾವಣೆಗೆ ಬಿಜೆಪಿ ಸಂಪೂರ್ಣ ಸಿದ್ಧವಾಗಿದೆ. ಯಾವ ಸಂದರ್ಭದಲ್ಲಿ ಚುನಾವಣೆ ಬಂದರೂ ನಮ್ಮ ಕಾರ್ಯಕರ್ತರು ಸಿದ್ಧವಾಗಿದ್ದಾರೆ ಎಂದು ಹೇಳಿದರು.
ಇನ್ನು, ಬಿಜೆಪಿಯಲ್ಲಿ ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಗೊಂದಲ ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಟೀಲ್ ಪ್ರತಿಕ್ರಿಯೆ ನೀಡಿದರು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಸಂಪುಟ ವಿಸ್ತರಣೆ ವಿಚಾರದಲ್ಲಿ ವರಿಷ್ಠರು ಹಾಗೂ ಸಿಎಂ ಯಡಿಯೂರಪ್ಪ ಚರ್ಚಿಸಿ ನಿರ್ಧರಿಸುತ್ತಾರೆ. ಅವರು ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ನ್ಯಾಯ ಕೊಡುತ್ತಾರೆ. ಯಾವ ಸಂದರ್ಭದಲ್ಲಿ ವಿಸ್ತರಣೆ ಮಾಡಬೇಕು ಎನ್ನುವ ನಿರ್ಧಾರವನ್ನೂ ತೆಗೆದುಕೊಳ್ಳುತ್ತಾರೆ ಎಂದರು.
ವಲಸಿಗರ ಪ್ರತ್ಯೇಕ ಸಭೆ ವಿಚಾರವಾಗಿ, ನಮ್ಮ ಮಧ್ಯೆ ವಲಸಿಗ, ಮೂಲ ಅನ್ನುವ ಗೊಂದಲ ಇಲ್ಲ. ಬಿ ಫಾರಂ ಕೊಟ್ಟು ಪಕ್ಷದ ಚಿಹ್ನೆ ಮೇಲೆ ಸ್ಪರ್ಧಿಸಿದ ಮೇಲೆ ಅವರೆಲ್ಲ ಬಿಜೆಪಿಯವರೇ. ಬೇರೆ ಬೇರೆ ಕಾರಣಗಳಿಗಾಗಿ ಅವರು ಸಭೆ ಮಾಡಿದ್ದಾರೆ. ಸಂಪುಟ ವಿಸ್ತರಣೆ ವಿಳಂಬ ವಿಚಾರಕ್ಕೆ ಅವರು ಸಭೆ ಮಾಡಿಲ್ಲ. ಅಭಿವೃದ್ಧಿ ಕಾರಣಕ್ಕೆ ಸಭೆ ಮಾಡಿದ್ದಾರೆ, ಗೊಂದಲ ಏನೂ ಇಲ್ಲ ಎಂದು ತೇಪೆ ಹಾಕುವ ಕೆಲಸ ಮಾಡಲು ಯತ್ನಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಕಟೀಲ್ ತಿರುಗೇಟು ನೀಡಿದರು. ಡಿಕೆಶಿಯವರ ಬಳಿ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ. ಡಿಕೆಶಿ ಸುಳ್ಳು ರಾಜಕಾರಣ ಮಾಡುವುದು ಬೇಡ. ಸಂತೋಷ್ ಗೆ ಈ ಸಂದರ್ಭದಲ್ಲಿ ಸಾಂತ್ವನ, ಧೈರ್ಯ ಹೇಳುವ ಕೆಲಸ ಆಗಬೇಕು. ಇದರಲ್ಲಿ ರಾಜಕಾರಣ ತರೋದು ಸರಿಯಲ್ಲ ಎಂದು ಕಿಡಿಕಾರಿದರು.
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ಚಿಂತನೆ ಮಾಡುತ್ತಿರುವ ವಿಚಾರ ಕುರಿತು, ಉಪಚುನಾವಣೆಗೆ ದಿನಾಂಕ ಘೋಷಣೆ ಆದ ಕೂಡಲೇ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಬೆಳಗಾವಿಗೂ ಆಗಲೇ ಅಭ್ಯರ್ಥಿ ಆಯ್ಕೆ ಬಗ್ಗೆ ನಿರ್ಧರಿಸುತ್ತೇವೆ ಎಂದರು.