ಪ್ರವಾಹ, ಕೊರೋನಾ ಸೋಂಕಿನ ನೆಪ; ಬೆಳಗಾವಿಯ ಸುವರ್ಣಸೌಧದಲ್ಲಿ 2 ವರ್ಷದಿಂದ ಇಲ್ಲ ಅಧಿವೇಶನ!
ಸುವರ್ಣ ಸೌಧಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುವ ಕಚೇರಿಗಳ ಸ್ಥಳಾಂತರದ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಹೋರಾಟಗಳು ಸಹ ನಡೆದಿವೆ. ವಿರೋಧ ಪಕ್ಷದ ನಾಯಕರಾಗಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಈ ಬಗ್ಗೆ ಯಾವುದೇ ನಿರ್ಣಯ ಮಾಡಿಲ್ಲ
ಬೆಳಗಾವಿ(ನ.30): 500ಕೋಟಿ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣ ಮಾಡಲಾಗಿದೆ. ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾಗಬೇಕಿದ್ದ ಸೌಧ, ಮೂಲೆಗುಂಪಾದಂತೆ ಕಾಣಿಸುತ್ತಿದೆ. ವರ್ಷದಲ್ಲಿ ಕೇವಲ 10 ದಿನ ಅಧಿವೇಶನಗಳಿಗೆ ಮಾತ್ರ ಸೌಧ ಬಳಕೆಯಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಪ್ರವಾಹ, ಕೊರೋನಾ ಸೋಂಕಿನ ಹಾವಳಿಯಿಂದ ಅದೂ ಸಹ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ನಡೆಯಬೇಕಿದ್ದ ಚಳಿಗಾಲದ ಅಧಿವೇಶನ ಈ ವರ್ಷ ಸಹ ಬೆಂಗಳೂರಿನಲ್ಲಿಯೇ ನಡೆಯಲಿದೆ. ಬೆಳಗಾವಿ ಭವ್ಯ ಸೌಧ ಈಗ ಭೂತ ಬಂಗಲೆಯ ರೀತಿಯಲ್ಲಿ ಕಾಣಿಸುತ್ತಿದೆ.
ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನ ದೊಡ್ಡ ಕನಸು ಕಂಡಿದ್ದರು. ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸುವ ಶಕ್ತಿ ಸೌಧ ಇದಾಗಲಿದೆ ಎಂಬ ಬಯಕೆ ಇತ್ತು. ಆದರೆ ಬೆಳಗಾವಿ ಸುವರ್ಣ ವಿಧಾನ ಸೌಧ ಕೇವಲ ಭೂತ ಬಂಗಲೆಯಾಗಿದೆ. ಇಲ್ಲಿ ಯಾವುದೇ ರಾಜ್ಯ ಮಟ್ಟದ ಕಚೇರಿಗಳ ಸ್ಥಳಾಂತರ ಆಗಿಲ್ಲ. ವರ್ಷದಲ್ಲಿ 10 ದಿನ ನಡೆಯುತ್ತಿದ್ದ ಚಳಿಗಾಲದ ಅಧಿವೇಶನ ಸಹ ಇದೀಗ ನಡೆಯುತ್ತಿಲ್ಲ. ಇದು ಉತ್ತರ ಕರ್ನಾಟಕ ಜನರ ಆಕ್ರೋಶ ಕಾರಣವಾಗಿದೆ. ಇದನ್ನು ಕೇಳುವ ಸ್ಥಿತಿಯಲ್ಲಿ ಸರ್ಕಾರ ಸಹ ಇಲ್ಲ.
ಸುವರ್ಣ ಸೌಧಕ್ಕೆ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲ ಆಗುವ ಕಚೇರಿಗಳ ಸ್ಥಳಾಂತರದ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅನೇಕ ಹೋರಾಟಗಳು ಸಹ ನಡೆದಿವೆ. ವಿರೋಧ ಪಕ್ಷದ ನಾಯಕರಾಗಿದ್ದ ಬಿ ಎಸ್ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಈ ಬಗ್ಗೆ ಯಾವುದೇ ನಿರ್ಣಯ ಮಾಡಿಲ್ಲ. ಬದಲಾಗಿ ಸೌಧವನ್ನು ಮಿನಿ ವಿಧಾನಸೌಧ ಮಾಡಲು ಹೊರಟಿದ್ದಾರೆ.
ಬೆಳಗಾವಿ ಜಿಲ್ಲಾ ಮಟ್ಟದ 23 ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದೆ. ಇದರಿಂದ ಸಹ ಬೆಳಗಾವಿ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ರಾಜ್ಯ ಮಟ್ಟದ ಕಚೇರಿ ಸ್ಥಳಾಂತರ ಬಗ್ಗೆ ಜಿಲ್ಲೆಯ ಪ್ರಭಾವಿ ನಾಯಕರು ಮೌನ ವಹಿಸಿದ್ದಾರೆ. ಇದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಓರ್ವ ಡಿಸಿಎಂ, ಮೂರು ಜನ ಸಚಿವರು ಹಾಗೂ 10 ಜನ ನಿಗಮದ ಅಧ್ಯಕ್ಷರು ಇದ್ದಾರೆ. ಆದರೆ ಶಕ್ತಿ ಕೇಂದ್ರವಾಗಬೇಕಿದ್ದ ಸೌಧ ಭೂತ ಬಂಗಲೆಯಾಗಿದೆ.