Guru Nanak Jayanti 2020: ಗುರು ನಾನಕ್ ಜಯಂತಿಯ ಪ್ರಾಮುಖ್ಯತೆ, ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು?

Happy Guru Nanak Jayanti 2020: ಸಿಖ್ ಧರ್ಮದ ಸಂಸ್ಥಾಪಕರಾದ ಗುರು ನಾನಕ್ 1469ರಲ್ಲಿ ಈಗಿನ ಪಾಕಿಸ್ತಾನಕ್ಕೆ ಸೇರಿದ ಲಾಹೋರ್ ಬಳಿಯ ತಳವಂಡಿಯಲ್ಲಿ ಜನಿಸಿದರು. ನವೆಂಬರ್​ನ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಗುರು ನಾನಕ್ ಜಯಂತಿಯನ್ನು ಆಚರಿಸಲಾಗುತ್ತದೆ.

ಇಂದು ಪ್ರಥಮ ಸಿಖ್ ಗುರುವಾದ ಗುರು ನಾನಕ್ ಅವರ ಜನ್ಮದಿನಾಚರಣೆ. ಸಿಖ್ ಧರ್ಮದ ಪವಿತ್ರ ಉತ್ಸವಗಳಲ್ಲಿ ಒಂದಾದ ಗುರು ನಾನಕ್ ಜಯಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಸಿಖ್ ಧರ್ಮದ ಸಂಸ್ಥಾಪಕರಾದ ಗುರು ನಾನಕ್ 1469ರಲ್ಲಿ ಈಗಿನ ಪಾಕಿಸ್ತಾನಕ್ಕೆ ಸೇರಿದ ಲಾಹೋರ್ ಬಳಿಯ ತಳವಂಡಿಯಲ್ಲಿ ಜನಿಸಿದರು. ಸಿಖ್ ಧರ್ಮದ ಹುಟ್ಟಿಗೆ 10 ಸಿಖ್ ಧರ್ಮಗುರುಗಳು ಕಾರಣರಾಗಿದ್ದಾರೆ. ಅವರಲ್ಲಿ ಗುರು ನಾನಕ್ ಮೊದಲಿಗರು.

 

ನವೆಂಬರ್​ನ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ಗುರು ನಾನಕ್ ಜಯಂತಿಯನ್ನು ಆಚರಿಸಲಾಗುತ್ತದೆ. ಹಿಂದೂ ಕುಟುಂಬದ ಕಲ್ಯಾಣ ದಾಸ್ ಮತ್ತು ತೃಪ್ತಿ ದಂಪತಿಗೆ ಹುಟ್ಟಿದ ಗುರು ನಾನಕ್ 16ನೇ ವಯಸ್ಸಿನಲ್ಲಿ ಸುಲಾಖನಿ ಎಂಬಾಕೆಯೊಂದಿಗೆ ಮದುವೆಯಾದರು. ಗುರು ನಾನಕ್ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಶ್ರೀಲಂಕಾ, ಬರ್ಮಾ, ಟಿಬೆಟ್​ನಲ್ಲಿ ಕೂಡ ಪ್ರಸಿದ್ಧರಾದವರು. ಬಾಲ್ಯದಿಂದಲೂ ಆಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದ ಗುರು ನಾನಕ್ ಅನೇಕ ಧರ್ಮಗಳ ಗ್ರಂಥ, ಸಾಹಿತ್ಯವನ್ನು ಓದಿದ್ದರು. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಒಡನಾಟ ಹೊಂದಿದ್ದ ಗುರು ನಾನಕ್ ದೇವರ ಸಂದೇಶವನ್ನು ಜಗತ್ತಿಗೆ ಸಾರಲು ಹೊಸ ಧರ್ಮವನ್ನು ಸ್ಥಾಪಿಸಬೇಕೆಂದು ನಿರ್ಧರಿಸಿ, ಸಿಖ್ ಧರ್ಮವನ್ನು ಸ್ಥಾಪಿಸಿದರು.

ಸರಳ ವ್ಯಕ್ತಿತ್ವದವರಾಗಿದ್ದ ಗುರು ನಾನಕ್ ಎಂದೂ ತಾನೊಬ್ಬ ಪವಾಡ ಪುರುಷ ಎಂದು ಹೇಳಿಕೊಳ್ಳಲಿಲ್ಲ. ಜನರೊಂದಿಗೆ ತಾವೂ ಒಬ್ಬರಾಗಿ, ದೇವರ ಬಗ್ಗೆ ಸಂದೇಶಗಳನ್ನು ಸಾರುತ್ತಾ ದೇಶಾದ್ಯಂತ ಸಂಚರಿಸಿದರು. ಮಹಿಳಾ ಸಮಾನತೆ, ಉಳ್ಳವರ ದೌರ್ಜನ್ಯ, ಜಾತೀವಾದದ ವಿರುದ್ಧ ಧ್ವನಿಯೆತ್ತಿದ ಅವರು ಸಮಾನತೆಗಾಗಿ ಹೋರಾಡಿದರು. ಗುರು ನಾನಕ್ ಅವರ ಹಿಂಬಾಲಕರನ್ನು ಸಿಖ್ಖರು ಎಂದು ಕರೆಯಲಾಯಿತು. ಸಿಖ್ ಎಂದರೆ ಪಂಜಾಬಿ ಭಾಷೆಯಲ್ಲಿ ಶಿಷ್ಯ ಎಂದು ಅರ್ಥ.

ಪಾಕಿಸ್ತಾನದ ಪಾಲಾಗಿರುವ ಕರ್ತಾರ್​ಪುರದಲ್ಲಿ ಗುರು ನಾನಕ್ ತಮ್ಮ ಕೊನೆಯ ದಿನಗಳನ್ನು ಕಳೆದರು. ಆ ಸ್ಥಳ ಸಿಖ್ಖರ ಪವಿತ್ರ ಕ್ಷೇತ್ರವಾಗಿದ್ದ ಭಾರತದ ಸಿಖ್ಖರು ಅಲ್ಲಿಗೆ ತೆರಳಲು ಅನುಕೂಲವಾಗುವಂತೆ ಕರ್ತಾರ್​​ಪುರ ಕಾರಿಡಾರ್ ನಿರ್ಮಿಸಲಾಗಿದೆ. 1539ರಲ್ಲಿ ಗುರು ನಾನಕ್ ಪ್ರಾರ್ಥನೆ ನಡೆಸುತ್ತಿರುವಾಗಲೇ ಸಾವನ್ನಪ್ಪಿದರು. ಅವರ ನೆನಪಿಗಾಗಿ ರಾವಿ ನದಿ ದಂಡೆಯಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದೆ.

ಗುರು ನಾನಕ್ ಜಯಂತಿಯ ಹುಣ್ಣಿಮೆಯ ಮಧ್ಯರಾತ್ರಿ 1.20ಕ್ಕೆ ಗರ್ಬಾನಿ ಹಾಡುಗಳನ್ನು ಹಾಡುವ ಮೂಲಕ ಸಿಖ್ಖರು ಗುರು ನಾನಕ್ ಜನ್ಮ ದಿನವನ್ನು ಆಚರಿಸುತ್ತಾರೆ. ಈ ಸಂಭ್ರಮಾಚರಣೆ ಮಧ್ಯರಾತ್ರಿ 2 ಗಂಟೆಯವರೆಗೂ ಮುಂದುವರೆಯುತ್ತದೆ. ಗುರು ನಾನಕ್ ಹುಣ್ಣಿಮೆಯ ರಾತ್ರಿ 1.20ಕ್ಕೆ ಹುಟ್ಟಿದ ಕಾರಣ ಅದೇ ಸಮಯಕ್ಕೆ ಸಂಭ್ರಮಾಚರಣೆ ಮಾಡಲಾಗುತ್ತದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *