ಸಿ.ಪಿ. ಯೋಗೇಶ್ವರ್​ಗೆ ಮಂತ್ರಿಸ್ಥಾನ ನಿಶ್ಚಿತ; ಅಚ್ಚರಿ ಹುಟ್ಟಿಸಿದ ಸಿಎಂ ಯಡಿಯೂರಪ್ಪ ಹೇಳಿಕೆ

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ನೂರಕ್ಕೆ ನೂರರಷ್ಟು ಸಿ.ಪಿ. ಯೋಗೇಶ್ವರ್ ಅವರನ್ನ ಮಂತ್ರಿ ಮಾಡಲಾಗುವುದು ಎಂದಿದ್ಧಾರೆ. ಆದರೆ, ಎಚ್. ವಿಶ್ವನಾಥ್ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.

ಬೆಂಗಳೂರು(ಡಿ. 01): ಬಿ.ಎಸ್. ಯಡಿಯೂರಪ್ಪ ಮತ್ತು ಸಿ ಪಿ ಯೋಗೇಶ್ವರ್ ಮಧ್ಯೆ ಬಹಳ ಕಾಲದಿಂದ ಒಡಕಿನ ಸಂಬಂಧ ಇದೆ. ಆಪರೇಷನ್ ಕಮಲಗಳಲ್ಲಿ ಯೋಗೇಶ್ವರ್ ತೀರಾ ಸಕ್ರಿಯವಾಗಿ ಜೋಡಿಸಿಕೊಂಡರೂ ಅವರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಒಂದು ರೀತಿಯ ಸಿಟ್ಟು ಇದೆ. ಯೋಗೇಶ್ವರ್ ಕೂಡ ಬಿಜೆಪಿಯಲ್ಲಿರುವ ಯಡಿಯೂರಪ್ಪ ವಿರೋಧಿ ಬಣದೊಂದಿಗೆ ಹೆಚ್ಚು ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಮಂತ್ರಿ ಸ್ಥಾನಕ್ಕಾಗಿ ಅವರು ಬಿ.ಎಲ್. ಸಂತೋಷ್ ಹಾಗೂ ರಮೇಶ್ ಜಾರಕಿಹೊಳಿ ನೆರವು ಯಾಚಿಸಿದರೇ ವಿನಃ ಯಡಿಯೂರಪ್ಪ ಅವರನ್ನು ನಂಬಿ ಕೂರಲಿಲ್ಲ. ಯೋಗೇಶ್ವರ್ ಅವರಿಗೆ ಮಂತ್ರಿಸ್ಥಾನ ಮಾಡುತ್ತೇನೆಂದು ಯಾವತ್ತೂ ಬಹಿರಂಗವಾಗಿ ವಾಗ್ದಾನ ಮಾಡದ ಯಡಿಯೂರಪ್ಪ ಇವತ್ತು ಸಿಪಿವೈ ಅವರನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿ ಅಚ್ಚರಿ ಹುಟ್ಟಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಯಡಿಯೂರಪ್ಪ, ನೂರಕ್ಕೆ ನೂರರಷ್ಟು ಸಿಪಿ ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎಂದಿದ್ದಾರೆ.

 

ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಮೂಲ ಬಿಜೆಪಿಗರಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮೂಲ ಬಿಜೆಪಿಗರಲ್ಲೇ ಕೆಲವರು ಯಡಿಯೂರಪ್ಪ ವಿರುದ್ಧ ಸಂಚು ರೂಪಿಸುತ್ತಿರುವ ಸುದ್ದಿಯೂ ಇದೆ. ಈ ಹಿನ್ನೆಲೆಯಲ್ಲಿ ಮೂಲ ಬಿಜೆಪಿಗರಿಗೆ ಸೆಡ್ಡು ಹೊಡೆಯಲು ಯೋಗೇಶ್ವರ್ ಅವರನ್ನ ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲು  ಯಡಿಯೂರಪ್ಪ ಯೋಜಿಸಿರಬಹುದು ಎಂದು ಹೇಳಲಾಗುತ್ತಿದೆ.

ಇದೇ ವೇಳೆ, ಹೆಚ್ ವಿಶ್ವನಾಥ್ ಅವರ ಅನರ್ಹ ಶಾಸಕತ್ವದ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತರಿಸಲು ನಕಾರ ತೋರಿ ಬರೀ ಕೈಮುಗಿದರು.

ಪಕ್ಷಾಂತರ ಕಾಯ್ದೆ ಪ್ರಕಾರ ಇತರ 16 ಶಾಸಕರಂತೆ ಎಚ್ ವಿಶ್ವನಾಥ್ ಅವರ ಶಾಸಕತ್ವ ಅನರ್ಹಗೊಂಡಿತ್ತು. ಆದರೆ, ಉಳಿದವರೆಲ್ಲರೂ ವಿವಿಧ ಚುನಾವಣೆಗಳಲ್ಲಿ ನಿಂತು ಗೆದ್ದರೆ, ವಿಶ್ವನಾಥ್ ಅವರು ಹುಣಸೂರು ಕ್ಷೇತ್ರದಲ್ಲಿ ಸೋತರು. ವಿಧಾನಪರಿಷತ್​ಗೆ ನಾಮನಿರ್ದೇಶನಗೊಂಡು ಶಾಸಕರಾದರೂ ಅದು ಅವರ ಸಚಿವ ಸ್ಥಾನಕ್ಕೆ ಮುಳುವಾಗಿದೆ. ನಾಮನಿರ್ದೇಶನಗೊಂಡಿರುವುದರಿಂದ ಅನರ್ಹತೆ ಅಂತ್ಯವಾಗುವುದಿಲ್ಲ. ಎಂಟಿಬಿ ನಾಗರಾಜ್ ಅವರಂತೆ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆದು ಶಾಸಕರಾಗಿದ್ದರೆ ಅನರ್ಹತೆ ಪಟ್ಟ ಕಳಚುತ್ತಿತ್ತು. ಈಗ ವಿಶ್ವನಾಥ್ ಅವರು ಮಂತ್ರಿ ಆಗಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ.

ಮುನಿರತ್ನ, ಎಂಟಿಬಿ ನಾಗರಾಜ್ ಮತ್ತು ಆರ್ ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ವಲಸಿಗರಿಗೆ ನೀಡಿದ್ದ ಬಹುತೇಕ ಭರವಸೆಯನ್ನು ಯಡಿಯೂರಪ್ಪ ಉಳಿಸಿಕೊಂಡಂತಾಗುತ್ತದೆ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *