ಬಸ್ಗಳಿಲ್ಲದ ಹಿನ್ನೆಲೆ ಸಾರ್ವಜನಿಕರ ಬಳಿ ಸುಲಿಗೆಗೆ ಇಳಿದ ಆಟೋ, ಕ್ಯಾಬ್ ಚಾಲಕರು; ಕಿ.ಮೀ. 100 ರೂ. ನಿಗದಿ
ಮೆಜೆಸ್ಟಿಕ್ನಿಂದ ಹನುಮಂತ ನಗರಕ್ಕೆ 400 ರೂ., ಬನ್ನೇರಘಟ್ಟ ರಸ್ತೆ, ಬಿಳಿಕೇಹಳ್ಳಿಗೆ 900 ರೂ., ಬನಶಂಕರಿಗೆ 500 ರೂ., ಯಶವಂತಪುರಕ್ಕೆ 600 ರೂ., ಎಲೆಕ್ಟ್ರಾನಿಕ್ ಸಿಟಿ 2000 ರೂ. ಶಿವಾಜಿನಗರಕ್ಕೆ 400 ರೂ.ಎಂದು ದರ ನಿಗದಿ ಮಾಡಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿದ್ದಾರೆ.
ಬೆಂಗಳೂರು(ಡಿ.12): ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ನೌಕರರ ಮುಷ್ಕರ ಎರಡನೇ ದಿನವೂ ಮುಂದುವರೆದಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ನಿನ್ನೆಯಿಂದ ಪ್ರಾರಂಭವಾಗಿರುವ ಈ ಧರಣಿ ತಮ್ಮ ಬೇಡಿಕೆ ಈಡೇರುವವರೆಗೆ ನಿಲ್ಲುವುದಿಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಯಾವುದೇ ಬಸ್ ರಸ್ತೆಗಿಳಿಯದ ಹಿನ್ನೆಲೆ, ಸಾರ್ವಜನಿಕರು ಪರದಾಟ ನಡೆಸುವಂತಾಗಿದೆ. ಬೇರೆ ದಾರಿ ಇಲ್ಲದೇ ಖಾಸಗಿ ಬಸ್ ಇಲ್ಲವೇ ಆಟೋ, ಕ್ಯಾಬ್ ಮೊರೆ ಹೋಗುತ್ತಿದ್ದಾರೆ. ಇದೇ ಸಮಯವನ್ನು ಲಾಭವಾಗಿಸಿಕೊಂಡ ಆಟೋ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ಕೀಳಲು ಮುಂದಾಗಿದ್ದಾರೆ.
ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಹಾಗೂ ಮೆಜೆಸ್ಟಿಕ್ ಬಸ್ ನಿಲ್ದಾಣಗಳಲ್ಲಿ ಆಟೋ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರಿಂದ ಹೆಚ್ಚೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ. ಖಾಸಗಿ ಬಸ್ಗಳು ಇದರಿಂದ ಹೊರತಾಗಿಲ್ಲ.ಸ್ಯಾಟ್ಲೈಟ್ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಗಳು ಗ್ರಾಹಕರಿಂದ ದುಪ್ಪಟ್ಟು ಇಲ್ಲವೇ ಮೂರು ಪಟ್ಟು ಹಣ ಕೀಳುತ್ತಿದ್ದಾರೆ. ಬೆಂಗಳೂರಿನಿಂದ ಮೈಸೂರಿಗೆ 150 ರೂ. ಪಡೆಯುವ ಬದಲು, 400 ರೂ ಪಡೆದು ಲಾಭ ಗಳಿಸುತ್ತಿದ್ದಾರೆ. ಇನ್ನು ಕ್ಯಾಬ್ ಚಾಲಕರು 500 ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಇದು ಗ್ರಾಹಕರ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಅತ್ತ ಕೆಎಸ್ಆರ್ಟಿಸಿ ಬಸ್ಗಳು ಇಲ್ಲದೇ, ಮತ್ತೊಂದೆಡೆ ಹೆಚ್ಚು ಹಣ ಕೊಟ್ಟು ಮೈಸೂರಿಗೆ ಹೊರಡಲು ಸಾಧ್ಯವಾಗದೇ ಪರದಾಡುತ್ತಿರುವ ಪ್ರಯಾಣಿಕರ ಪರಿಸ್ಥಿತಿಯಾಗಿದೆ.
ಇನ್ನು, ಬೆಂಗಳೂರು ನಗರದ ಹೃದಯ ಭಾಗ ಎನಿಸಿಕೊಂಡಿರುವ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೂ ಆಟೋ ಮತ್ತು ಕ್ಯಾಬ್ ಚಾಲಕರ ಹಗಲು ದರೋಡೆ ಮುಂದುವರೆದಿದೆ. ಬಸ್ಗಳು ರಸ್ತೆಗಿಳಿಯದ ಹಿನ್ನೆಲೆ, ಇದೇ ಸಮಯವನ್ನು ಬಳಸಿಕೊಂಡ ಆಟೋ ಮತ್ತು ಕ್ಯಾಬ್ ಚಾಲಕರು ಮೆಜೆಸ್ಟಿಕ್ ಬಸ್ ನಿಲ್ದಾಣದೊಳಗೆ ದಾಂಗುಡಿ ಇಡುತ್ತಿವೆ. ಬಸ್ ಸ್ಟ್ಯಾಂಡ್ ಒಳಗೆ ಹೋಗುವ ಖಾಸಗಿ ಬಸ್, ಆಟೋ ಹಾಗೂ ಕ್ಯಾಬ್ಗಳನ್ನು ಪೊಲೀಸರು ವಾಪಾಸ್ ಕಳುಹಿಸುತ್ತಿದ್ದರೂ ಸಹ, ಪ್ರಯಾಣಿಕರ ಬಳಿ ಸುಲಿಗೆ ಮಾಡಲು ನಿಂತಿವೆ.
ಕೆಲ ಆಟೋ ಮತ್ತು ಖಾಸಗಿ ಬಸ್ಗಳು ಡಬಲ್, ತ್ರಿಬಲ್ ದರ ಹಾಕುತ್ತಿದ್ದು, ಪ್ರಯಾಣಿಕರಿಗೆ ಬರೆ ಹಾಕುತ್ತಿವೆ. ಕೆಲ ಆಟೋ ಚಾಲಕರು ಹಗಲು ದರೋಡೆ ಮಾಡುತ್ತಿದ್ದಾರೆ. ಒಂದು ಕಿಲೋಮೀಟರ್ಗೆ ನೂರು ರೂಪಾಯಿ ಕೇಳುತ್ತಿದ್ದಾರೆ.
ಮೆಜೆಸ್ಟಿಕ್ನಿಂದ ಹನುಮಂತ ನಗರಕ್ಕೆ 400 ರೂ., ಬನ್ನೇರಘಟ್ಟ ರಸ್ತೆ, ಬಿಳಿಕೇಹಳ್ಳಿಗೆ 900 ರೂ., ಬನಶಂಕರಿಗೆ 500 ರೂ., ಯಶವಂತಪುರಕ್ಕೆ 600 ರೂ., ಎಲೆಕ್ಟ್ರಾನಿಕ್ ಸಿಟಿ 2000 ರೂ. ಶಿವಾಜಿನಗರಕ್ಕೆ 400 ರೂ.ಎಂದು ದರ ನಿಗದಿ ಮಾಡಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿದ್ದಾರೆ.
ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಧರಣಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಮಾತ್ರ ಸುಳ್ಳಲ್ಲ. ಸರ್ಕಾರವು ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಿ ಸಮಸ್ಯೆ ನಿವಾರಣೆ ಮಾಡಬೇಕೆಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.