ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವೇ ಇಲ್ಲ; ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ
Laxman Savadi: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಆ ರೀತಿ ಮಾಡಿದರೆ ಬೇರೆ ನಿಗಮಗಳು ಬೇಡಿಕೆ ಇಡುತ್ತವೆ. ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಇಂದಿನ ಸಭೆಗೆ ಎಲ್ಲರನ್ನೂ ಆಹ್ವಾನ ಮಾಡಿದ್ದೇನೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ಎಲ್ಲವೂ ಮುಗಿಯುತ್ತದೆ ಎಂಬ ಭರವಸೆ ಇದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು ಅನ್ನೋ ಬೇಡಿಕೆ ಈಡೇರಿಕೆ ಸಾಧ್ಯವೇ ಇಲ್ಲ. ಒಂದು ನಿಗಮಕ್ಕೆ ಆ ರೀತಿ ಮಾಡಿದರೆ ಬೇರೆ ನಿಗಮಗಳು ಬೇಡಿಕೆ ಇಡುತ್ತಾರೆ. ಹೀಗಾಗಿ ಆ ಬೇಡಿಕೆ ಈಡೇರಿಕೆ ಅಸಾಧ್ಯ. ಉಳಿದ ಎಲ್ಲ ಬೇಡಿಕೆಗಳನ್ನು ಆರ್ಥಿಕ ಇತಿಮಿತಿಗಳಲ್ಲಿ ಈಡೇರಿಸುತ್ತೇವೆ. ಇಂದಿನ ಸಭೆ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ. ಅದನ್ನು ಸದ್ಯಕ್ಕೆ ಜಾರಿ ಮಾಡುವುದಿಲ್ಲ. ಸಾರಿಗೆ ನೌಕರರೆಲ್ಲರೂ ನಮ್ಮ ಕುಟುಂಬವರು. ಕಷ್ಟದ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ಭಾವನೆ. ಇವತ್ತಿನ ಸಭೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಆಹ್ವಾನ ನೀಡಿಲ್ಲ. ಕೋಡಿಹಳ್ಳಿ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಮುಂದಿನ 2-3 ದಿನಗಳಲ್ಲಿ ಅದನ್ನು ಬಿಚ್ಚಿಡುತ್ತೇನೆ ಎಂದು ಸಚಿವ ಸವದಿ ಹೇಳಿದ್ದಾರೆ.
ಪ್ರತಿಭಟನೆ ಹಿಂದೆ ಕಾಂಗ್ರೆಸ್ ಇದೆಯಾ ಅನ್ನೋ ಪ್ರಶ್ನೆಗೆ ಪರೋಕ್ಷವಾಗಿ ಕಾಂಗ್ರೆಸ್ ಬೆಂಬಲ ಇದೆ ಎಂದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನಿನ್ನೆ ಕೆಪಿಸಿಸಿ ಅಧ್ಯಕ್ಷರು ಪ್ರತಿಭಟನೆ ಜಾಗಕ್ಕೆ ಹೋಗಿ ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಬೆಂಬಲ ಇದೆ ಅನ್ನೋ ಮಾತನ್ನು ನಾನು ತಳ್ಳಿ ಹಾಕುವುದಿಲ್ಲ. ಕಾಂಗ್ರೆಸ್ ನಾಯಕರ ಜೊತೆ ಕೋಡಿಹಳ್ಳಿ ಮಾತನಾಡಿರೋ ಆಡಿಯೋ ನನಗೆ ಸಿಕ್ಕಿಲ್ಲ. ನನಗೆ ಸಿಕ್ಕಿದ ಕೂಡಲೇ ಅದನ್ನ ರಿಲೀಸ್ ಮಾಡುತ್ತೇನೆ ಎಂದಿದ್ದಾರೆ.