ಬೆಂಗಳೂರಿನಲ್ಲಿ ಎಸ್ಕಾರ್ಟ್​ ಭದ್ರತೆಯಲ್ಲಿ BMTC ಬಸ್​ ಸಂಚಾರ ಆರಂಭ; ರಾಜ್ಯದ ಹಲವೆಡೆ ರಸ್ತೆಗಿಳಿದ KSRTC ಬಸ್​ಗಳು

KSRTC BMTC Employees Strike: ಇಂದು ಮುಂಜಾನೆ ಬೆಂಗಳೂರಿನ ಮೆಜೆಸ್ಟಿಕ್​ನಿಂದ ಪೊಲೀಸ್ ಸರ್ಪಗಾವಲಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭಿಸಿದೆ. ಮಂಗಳೂರಿಗೆ 61 ಬಸ್, ಪುತ್ತೂರಿಗೆ 1, ಶಿವಮೊಗ್ಗಕ್ಕೆ 2 ಕೆಎಸ್​ಆರ್​ಟಿಸಿ ಬಸ್ ಆರಂಭವಾಗಿದೆ.

ಬೆಂಗಳೂರು (ಡಿ. 13): ಮೂರು ದಿನಗಳಿಂದ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಇಂದು ಕೆಎಸ್​ಆರ್​ಟಿಸಿ ಬಸ್​ಗಳು ನಿಧಾನವಾಗಿ ಸಂಚಾರವನ್ನು ಆರಂಭಿಸಿವೆ. ರಾಜ್ಯಾದ್ಯಂತ ಕೆಲವು ಕೆಎಸ್​ಆರ್​​ಟಿಸಿ ಬಸ್​ಗಳ ಸಂಚಾರ ಆರಂಭವಾಗಿದ್ದು, ದೂರದೂರುಗಳಿಗೆ ತೆರಳುವ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ. ಹಾಗೇ, ಬೆಂಗಳೂರಿನಲ್ಲಿ ಕೂಡ ಇಂದು ಕೆಲವು ಬಿಎಂಟಿಸಿ ಬಸ್​ಗಳು ಸಂಚಾರ ನಡೆಸತೊಡಗಿವೆ. ಬಿಎಂಟಿಸಿ ಬಸ್​ಗಳ ಚಾಲಕರು, ಕಂಡಕ್ಟರ್​ಗೆ ಮುಷ್ಕರ ನಿರತರಿಂದ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಪೊಲೀಸ್ ಎಸ್ಕಾರ್ಟ್​ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಬೆಳಗ್ಗೆ ಪೊಲೀಸ್​ ವಾಹನಗಳ ಭದ್ರತೆಯೊಂದಿಗೆ ಬಿಎಂಟಿಸಿ ಬಸ್​ಗಳು ಸಂಚಾರ ಆರಂಭಿಸಿವೆ.

ರಾಜ್ಯಾದ್ಯಂತ ನಿಧಾನಗತಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳ ಸಂಚಾರ ಆರಂಭವಾಗಿವೆ. ಇಂದು ಮುಂಜಾನೆಯಿಂದ ವಿವಿಧ ಊರುಗಳಿಗೆ ಕೆಎಸ್​ಆರ್​ಟಿಸಿಯ ಒಟ್ಟು 66 ಬಸ್​ಗಳು ಸೇವೆ ಆರಂಭಿಸಿವೆ. ಮಂಗಳೂರಿಗೆ 61 ಬಸ್, ಪುತ್ತೂರಿಗೆ 1, ಶಿವಮೊಗ್ಗಕ್ಕೆ 2 ಬಸ್ ಆರಂಭವಾಗಿದೆ ಎಂದು ಕೆಎಸ್​ಆರ್​ಟಿಸಿ ಮಾಹಿತಿ ನೀಡಿದೆ.

ಇಂದು ಮುಂಜಾನೆ ಬೆಂಗಳೂರಿನ ಮೆಜೆಸ್ಟಿಕ್​ನಿಂದ ಎಜಿಎಸ್ ಲೇಔಟ್ ಕಡೆಗೆ ಸಂಚರಿಸುವ 45D ಸಂಖ್ಯೆಯ ಬಸ್ ಸಂಚಾರ ಆರಂಭಿಸಿದೆ. ಪೊಲೀಸ್ ಸರ್ಪಗಾವಲಿನಲ್ಲಿ ಬಸ್ ಸಂಚಾರ ಆರಂಭಿಸಿದೆ. ಮತ್ತೊಂದು ಬಸ್​ ಎಜಿಎಸ್ ಲೇಔಟ್ ನಿಂದ ಮೆಜೆಸ್ಟಿಕ್​ಗೆ ಆಗಮಿಸಿದೆ. 7-8 ಪ್ರಯಾಣಿಕರನ್ನು ಹೊತ್ತು ಸಾಗಿದ ಬಿಎಂಟಿಸಿ ಬಸ್​ಗೆ ಸಾರಿಗೆ ಇಲಾಖೆಯಿಂದ ಎಸ್ಕಾರ್ಟ್​ ವ್ಯವಸ್ಥೆ ಕಲ್ಪಿಸಲಾಯಿತು.

ಎಜಿಎಸ್​ ಲೇಔಟ್​ನ ಡಿಪೋದಿಂದ ಬಸ್ ಹೊರ ಬರುವಾಗ ಯಾರೂ ತಡೆಯಲಿಲ್ಲ. ಪೊಲೀಸರು ಸ್ವಲ್ಪ ದೂರ ಎಸ್ಕಾರ್ಟ್ ಮಾಡಿದರು. ಮಾರ್ಗ ಮಧ್ಯದಲ್ಲಿ ಯಾರೂ ತಡೆದಿಲ್ಲ. ಜನರು ಕೂಡ ಬರುತ್ತಿದ್ದಾರೆ. ಸಾರಿಗೆ ನೌಕರರಿಗೆ ಒಳ್ಳೆಯದಾಗಲಿ ಅಂತ ಮುಷ್ಕರ ಮಾಡುತ್ತಿದ್ದಾರೆ. ಮುಷ್ಕರದ ನಡುವೆ ಡ್ಯೂಟಿ ಕೂಡ ಮುಖ್ಯ. ಜನರಿಗೆ ಅನುಕೂಲವಾಗಬೇಕು ಎಂಬ ಕಾರಣಕ್ಕೆ ಬಸ್ ಸಂಚಾರ ಆರಂಭಿಸಿದ್ದೇವೆ ಎಂದು ಬಿಎಂಟಿಸಿ ಬಸ್​ ಕಂಡಕ್ಟರ್ ಹೇಳಿದ್ದಾರೆ.

ಬೆಳಗ್ಗೆಯಿಂದ ಸಂಚಾರ ಆರಂಭಿಸಿರುವ ಮತ್ತೊಂದು ಬಿಎಂಟಿಸಿ ಬಸ್​ಗೂ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ವಿಜಯನಗರದಿಂದ ಮೆಜೆಸ್ಟಿಕ್​ಗೆ ಬಂದ ಬಿಎಂಟಿಸಿ ಬಸ್ ಹಿಂದೆ ಸಾರಿಗೆ ಇಲಾಖೆಯ ಜೀಪ್​ನಿಂದ ಎಸ್ಕಾರ್ಟ್ ಆಗಮಿಸಿತು. ಬೆಂಗಳೂರಿನಲ್ಲಿ ನಿಧಾನವಾಗಿ ಬಿಎಂಟಿಸಿ ಬಸ್​ ಸಂಚಾರ ಆರಂಭವಾಗುತ್ತಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *