ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಕುರಿತ ಸಿದ್ಧರಾಮಯ್ಯ ಹೇಳಿಕೆ ತಿರುಕನ ಕನಸು ; ಸಚಿವ ಈಶ್ವರಪ್ಪ ಲೇವಡಿ
ನಮ್ಮ ಸರ್ಕಾರ ಬರುತ್ತೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುವುದು ಸಿದ್ದರಾಮಯ್ಯನವರದು ಹಗಲು ಕನಸು. ಧರ್ಮ ಸಂಸ್ಕೃತಿಯನ್ನು ರಕ್ಷಣೆ ಬಗ್ಗೆ ಮನಸ್ಸು ಇರುವವರು ಗೋ ಹತ್ಯೆ ನಿಷೇಧ ಕಾಯಿದೆಯನ್ನು ವಿರೋಧಿಸುವುದಿಲ್ಲ
ಆನೇಕಲ್(ಡಿಸೆಂಬರ್. 13): ರಾಜ್ಯ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ಸಿದ್ದರಾಮಯ್ಯನವರ ಹೇಳಿಕೆ ತಿರುಕನ ಕನಸು ಇದ್ದಂತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಧಿಕಾರಕ್ಕೆ ಬರುವುದು ಅಸಾಧ್ಯ ಹಾಗಾಗಿ ಸಿದ್ದರಾಮಯ್ಯನವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಆನೇಕಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಶೇಕಡ 90ಷ್ಟು ಜನ ಗೋಹತ್ಯೆ ನಿಷೇಧ ಆಗಬೇಕು ಎನ್ನುತ್ತಿದ್ದಾರೆ. ಆದರೆ, ಸಿದ್ದರಾಮಯ್ಯನವರು ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವ ಸಲುವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಉಡುಪಿ ದಕ್ಷಿಣ ಕನ್ನಡ ಮಂಗಳೂರು ಭಾಗದಲ್ಲಿ ಗೋವುಗಳ ಕಳ್ಳತನ ಮಾಡುತ್ತಿದ್ದರು. ಕೊಟ್ಟಿಗೆಗೆ ನುಗ್ಗಿ ಕರುಗಳನ್ನು ಬಿಡದೆ ಕಳ್ಳತನ ಮಾಡಲಾಗುತ್ತಿತ್ತು. ಮನೆಯಿಂದ ಮಾಲೀಕರು ಹೊರಬಂದರೆ ಚಾಕು ತೋರಿಸಿ ಬೆದರಿಸುತ್ತಿದ್ದರು. ಕಳ್ಳತನ ಮಾಡಿದ್ದ ಹಸುಗಳನ್ನು ಹಿಡಿಯುವ ಕೆಲಸವನ್ನು ಯುವಕರು ಮಾಡುತ್ತಿದ್ದರು. ಆದರೆ ಗೋ ಹತ್ಯೆ ತಡೆಯಲು ಹೋದ 28 ಜನ ಯುವಕನ ಕೊಲೆಯಾಯಿತು ಎಂದರು.
ಈ ಬಗ್ಗೆ ವಿಧಾನಪರಿಷತ್ ನಲ್ಲೂ ಕೂಡ ನಾನು ಚರ್ಚೆ ಮಾಡಿದ್ದೆ. ಅಂದಿನ ಸಿದ್ದರಾಮಯ್ಯ ಸರ್ಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಆರ್ಎಸ್ಎಸ್ ನವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದರು. ಅದೇ ಗೋಮಾತೆ ಶಾಪದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡತು ಎಂದು ತಿಳಿಸಿದರು.
ನಮ್ಮ ಸರ್ಕಾರ ಬರುತ್ತೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುವುದು ಸಿದ್ದರಾಮಯ್ಯನವರದು ಹಗಲು ಕನಸು. ಧರ್ಮ ಸಂಸ್ಕೃತಿಯನ್ನು ರಕ್ಷಣೆ ಬಗ್ಗೆ ಮನಸ್ಸು ಇರುವವರು ಗೋ ಹತ್ಯೆ ನಿಷೇಧ ಕಾಯಿದೆಯನ್ನು ವಿರೋಧಿಸುವುದಿಲ್ಲ. ಜೊತೆಗೆ ಮುಂದಿನ ದಿನಗಳಲ್ಲಿ ಲವ್ ಜಿಹಾದ್ ಕಿತ್ತುಹಾಕಿ ಹೆಣ್ಣುಮಕ್ಕಳ ರಕ್ಷಣೆಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದರು.
ಜೊತೆಗೆ ಚುನಾಯಿತ ಪ್ರತಿನಿಧಿಗಳನ್ನು ಹರಾಜು ಹಾಕುವುದು ಕಾನೂನುಬಾಹಿರ. ಜನಪ್ರತಿನಿಧಿಗಳನು ಹರಾಜು ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈಗಾಗಲೇ ಚುನಾವಣಾಧಿಕಾರಿಗಳಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ.
ಇದೇ ರೀತಿ ಮುಂದುವರೆದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಆಸಕ್ತಿ ಇರುವವರು ಚುನಾವಣೆಗೆ ನಿಲ್ಲಬೇಕು ಗೆದ್ದು ಬರಬೇಕು. ಗ್ರಾಮೀಣ ಭಾಗದ ಜನ ಕೂಡ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.