ರೈತರ ಪ್ರತಿಭಟನೆ ರಾಜಕೀಯದ ಕುರಿತೇ ಹೊರತು ಆರ್ಥಿಕತೆಯ ಬಗ್ಗೆ ಅಲ್ಲ: ಸುರ್ಜಿತ್ ಭಲ್ಲಾ ಹೇಳಿಕೆ

ಸುರ್ಜಿತ್ ಭಲ್ಲಾ, ರೈತರು ನಡೆಸುತ್ತಿರುವ ಚಳುವಳಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು, ಆರ್ಥಿಕತೆಯ ಬಗ್ಗೆಯಲ್ಲ. ರೈತರ ಹೋರಾಟ ರಾಜಕೀಯ ಕುಮ್ಮಕ್ಕಿನಿಂದ ಕೂಡಿದೆ.

ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 17ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಸರ್ಕಾರ ಹೊಸ ಕೃಷಿ ಕಾಯ್ದೆಗೆ ಅಲ್ಪ ಪ್ರಮಾಣದ ರೈತರು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಅರ್ಥಶಾಸ್ತ್ರಜ್ಞ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಸುರ್ಜಿತ್ ಭಲ್ಲಾ ಅಭಿಪ್ರಾಯಪಟ್ಟಿದ್ದಾರೆ.  ಸುರ್ಜಿತ್ ಭಲ್ಲಾ ಅವರನ್ನು 2019 ರ ಅಕ್ಟೋಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್‌ನ ನೇಮಕಾತಿ ಸಮಿತಿ (ಎಸಿಸಿ) ಐಎಂಎಫ್‌ಗೆ ನೇಮಕ ಮಾಡಿತ್ತು. ಸುರ್ಜಿತ್ ಭಲ್ಲಾ ಅವರು ಐಎಂಎಫ್‌ನಲ್ಲಿ ಭಾರತವಲ್ಲದೆ ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾ ದೇಶಗಳನ್ನೂ ಸಹ ಪ್ರತಿನಿಧಿಸುತ್ತಿದ್ದಾರೆ.

ಪ್ರತಿಕ್ರಿಯಿಸಿರುವ ಸುರ್ಜಿತ್ ಭಲ್ಲಾ, ರೈತರು ನಡೆಸುತ್ತಿರುವ ಚಳುವಳಿ ರಾಜಕೀಯ ಪ್ರೇರಿತವಾಗಿದೆಯೇ ಹೊರತು, ಆರ್ಥಿಕತೆಯ ಬಗ್ಗೆಯಲ್ಲ ಎಂದು ತಿಳಿಸಿದ್ದಾರೆ. ರೈತರ ಹೋರಾಟ ರಾಜಕೀಯ ಕುಮ್ಮಕ್ಕಿನಿಂದ ಕೂಡಿದೆ. ಅದೂ ಸಹ ಕೇವಲ ಪಂಜಾಬ್ ಹಾಗೂ ಹರಿಯಾಣ ಪ್ರದೇಶಕ್ಕೆ ಸೀಮಿತವಾಗಿದೆ ಎಂದಿದ್ದಾರೆ.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಸಾವಿರಾರು ರೈತರು ಹೋರಾಟ ಮುಂದುವರೆಸಿದ್ದಾರೆ. ಕೋವಿಡ್-19 ಸೋಂಕಿನ ಭೀತಿ ಮತ್ತು ತೀವ್ರ ಚಳಿಯ ನಡುವೆಯೂ ದೆಹಲಿಯ ಗುಡಿಗಳ ವಿವಿಧೆಡೆ ನಿರಂತರ ಪ್ರತಿಭಟನೆ ನಡೆಸಿದ್ದಾರೆ. ಹೊಸ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ (ಎಂಎಸ್‌ಪಿ) ಮತ್ತು ಎಪಿಎಂಸಿ ವ್ಯವಸ್ಥೆಯನ್ನು ಒದಗಿಸುವುದನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

ಸುರ್ಜಿತ್ ಭಲ್ಲಾ ಅವರು, ಮೇಲ್ನೋಟಕ್ಕೆ ಪ್ರತಿಭಟನೆಯು ಇತರೆ ಗುಂಪುಗಳ ಜನರಿಂದ ವ್ಯಾಪಕವಾದ ಬೆಂಬಲವನ್ನು ಗಳಿಸಿದಂತೆ ತೋರುತ್ತದೆಯಾದರೂ, ಹೋರಾಟ ನಿರತ ಜನ ರಾಜಕೀಯ ಸಂಪರ್ಕವನ್ನು ಹೊಂದಿರಬಹುದೆಂದು ಶಂಕೆ ವ್ಯಕ್ತಪಡಿಸಿದರು.

ರೈತರ ಚಳುವಳಿಯ ಹಿಂದೆ ರಾಜಕೀಯ ಬೆರೆತಿದೆ ಎಂಬುದು ಸ್ಪಷ್ಟವಾಗಿದೆ. ಭಾರತದಲ್ಲಿ ಸುಮಾರು ನೂರು ಮಿಲಿಯನ್ ರೈತರು ಇದ್ದಾರೆ ಎಂದು ನಮಗೆ ತಿಳಿದಿದೆ. ಅವುಗಳಲ್ಲಿ ಎಂಎಸ್ಪಿ ಮತ್ತು ಎಪಿಎಂಸಿ ಇತ್ಯಾದಿಗಳಿಂದ ಎಷ್ಟು ಜನರಿಗೆ ಲಾಭ? ಭಾರತದಲ್ಲಿ ಗೋಧಿ ಬೆಲೆಗಳು ವಿಶ್ವ ಬೆಲೆಗಳಿಗಿಂತ 40-50 ಶೇಕಡಾ ಹೆಚ್ಚಾಗಿದೆ ಎಂದರು.

ತಮ್ಮ ಅನ್ಯಾಯದ ದಿನಗಳು ಮುಗಿದಿವೆ ಎಂದು ಭಾವಿಸಿ ಪಂಜಾಬ್ ಮತ್ತು ಹರಿಯಾಣದ ಶ್ರೀಮಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಎಂ.ಎಸ್.ಪಿ.ಯನ್ನು ಕಾನೂನು ಬದ್ಧಗೊಳಿಸಬೇಕೆಂಬ ರೈತರ ಬೇಡಿಕೆಯನ್ನು ಭಲ್ಲಾ ಟೀಕಿಸಿದ್ದಾರೆ.
ಪಂಜಾಬ್ ಮತ್ತು ಹರಿಯಾಣದಲ್ಲಿ ಮಾತ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಕೆಲವು ಶ್ರೀಮಂತರು, ರಾಜಕೀಯವಾಗಿ ಸಂಪರ್ಕ ಹೊಂದಿದ ರೈತರಿಂದ ಇಂತಹ ಹೋರಾಟಗಳು ನಡೆದಿವೆಯಷ್ಟೆ ಎಂದೂ ಅವರು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *