ಸಾರಿಗೆ ನೌಕರರ ಮುಷ್ಕರದಿಂದ 4 ದಿನದಲ್ಲಿ ಸರ್ಕಾರಕ್ಕೆ 54 ಕೋಟಿ ರೂ. ನಷ್ಟ

ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ರಸ್ತೆ ಸಾರಿಗೆ ನಿಗಮದ ಸಾರಿಗೆ ನೌಕರರ ಮುಷ್ಕರದಿಂದಾಗಿ 4 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 53.4 ಕೋಟಿ ರೂ. ನಷ್ಟ ಉಂಟಾಗಿದೆ

ಬೆಂಗಳೂರು (ಡಿ. 15): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ನೇಮಕ ಮಾಡಬೇಕು ಎಂಬ ಪ್ರಮುಖ ಬೇಡಿಕೆ ಸೇರಿದಂತೆ ಇನ್ನೂ ಕೆಲವು ಬೇಡಿಕೆಗಳ ಈಡೇರಿಕೆಗಾಗಿ 3 ದಿನಗಳ ಕಾಲ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಈಶಾನ್ಯ ರಸ್ತೆ ಸಾರಿಗೆ, ವಾಯುವ್ಯ ರಸ್ತೆ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. 4 ದಿನಗಳ ಕಾಲ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟವಾಗಿದೆ. ಸಾರಿಗೆ ನೌಕರರ ಮುಷ್ಕರದಿಂದ ಸರ್ಕಾರಕ್ಕೆ 4 ದಿನಕ್ಕೆ ಬರೋಬ್ಬರಿ 54 ಕೋಟಿ ರೂ. ನಷ್ಟವಾಗಿದೆ. ನಾಲ್ಕು ದಿನಗಳ ಕಾಲ ನಾಲ್ಕೂ ನಿಗಮದಿಂದ ಬಸ್​ಗಳು ಸಂಚಾರ ನಡೆಸಿರಲಿಲ್ಲ. ಮುಷ್ಕರದ ನಡುವೆಯೂ ಕೆಲವು ಸಾರಿಗೆ ಬಸ್​ಗಳ ಓಡಾಟದಿಂದ ಮೂರು ಕೋಟಿ ರೂ. ಕಲೆಕ್ಷನ್ ಆಗಿದೆ. ಕೆಎಸ್​ಆರ್​ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ರಸ್ತೆ ಸಾರಿಗೆಯಲ್ಲಿ ಒಟ್ಟು 1.40 ಲಕ್ಷ ಸಾರಿಗೆ ಸಿಬ್ಬಂದಿಗಳಿದ್ದಾರೆ. ನಾಲ್ಕು ನಿಗಮದಿಂದ 36 ಸಾವಿರಕ್ಕೂ ಹೆಚ್ಚು ಸಾರಿಗೆ ಬಸ್​ಗಳಿವೆ.

ಕೆಎಸ್​ಆರ್​ಟಿಸಿಯಿಂದ ಪ್ರತಿದಿನ 6,000 ಬಸ್​ಗಳು ಸಂಚಾರ ಮಾಡುತ್ತಿವೆ. ಇದರಿಂದ ಪ್ರತಿದಿನ ಸುಮಾರು 4 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ನಾಲ್ಕು ದಿನಗಳ ಮುಷ್ಕರದಿಂದ ಕೆಎಸ್​ಆರ್​ಟಿಯಲ್ಲಿ ಅಂದಾಜು 16 ಕೋಟಿ ರೂ. ನಷ್ಟ ಉಂಟಾಗಿದೆ.

ಬಿಎಂಟಿಸಿಯಿಂದ ಪ್ರತಿದಿನ 4,900ರಿಂದ 5,000 ಬಸ್​ಗಳು ಸಂಚಾರ ಮಾಡುತ್ತವೆ. ಬಿಎಂಟಿಸಿಯಲ್ಲಿ ಪ್ರತಿದಿನ ಸುಮಾರು 2.10 ಕೋಟಿ ರೂ. ಕಲೆಕ್ಷನ್ ಆಗುತ್ತದೆ. ನಾಲ್ಕು ದಿನದ ಮುಷ್ಕರದಿಂದ ಬಿಎಂಟಿಸಿಯಲ್ಲಿ 8.4 ಕೋಟಿ ರೂ. ಅಂದಾಜು ನಷ್ಟವಾಗಿದೆ.

ಈಶಾನ್ಯ ರಸ್ತೆ ಸಾರಿಗೆಯಿಂದ ಪ್ರತಿದಿನ 3775 ಬಸ್ಸುಗಳು ಸಂಚಾರ ಮಾಡುತ್ತಿವೆ. ಮುಷ್ಕರವಿದ್ದುದರಿಂದ ಶುಕ್ರವಾರ, ಶನಿವಾರ ಮತ್ತು ಭಾನುವಾರ ಬಹುತೇಕ ಬಸ್ ಸಂಚಾರ ಮಾಡಿರಲಿಲ್ಲ. ನಿನ್ನೆ ಕೂಡ ಕೆಲವೇ ಬಸ್​ಗಳು ಸಂಚಾರ ನಡೆಸಿದ್ದವು. ಹೀಗಾಗಿ, ಈಶಾನ್ಯ ರಸ್ತೆ ಸಾರಿಗೆಯ ನೌಕರರ ಮುಷ್ಕರದಿಂದ ಅಂದಾಜು 15 ಕೋಟಿ ರೂ. ನಷ್ಟವಾಗಿದೆ.

ವಾಯುವ್ಯ ರಸ್ತೆ ಸಾರಿಗೆಯಲ್ಲಿ ಪ್ರತಿದಿನ 3,402 ಬಸ್​ಗಳು ಸಂಚಾರ ಮಾಡುತ್ತವೆ. ಇದರಿಂದ ಪ್ರತಿದಿನದ ಸುಮಾರು 3.5 ಕೋಟ ರೂ. ಆದಾಯ ಬರುತ್ತದೆ. ನಾಲ್ಕು ದಿನದ ಸಾರಿಗೆ ನೌಕರರ ಮುಷ್ಕರದಿಂದ ವಾಯುವ್ಯ ಸಾರಿಗೆಯಲ್ಲಿ 14 ಕೋಟಿ ರೂ. ನಷ್ಟವಾಗಿದೆ.

ವಾಯುವ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ರಸ್ತೆ ಸಾರಿಗೆ ನಿಗಮ, ಕೆಎಸ್​ಆರ್​ಟಿಸಿ, ಬಿಎಂಟಿಸಿ ಸಾರಿಗೆ ನೌಕರರ ಮುಷ್ಕರದಿಂದಾಗಿ 4 ದಿನಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಒಟ್ಟು 53.4 ಕೋಟಿ ರೂ. ನಷ್ಟ ಉಂಟಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *