Corona Vaccine: ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಗೆ ಸಿದ್ಧತೆ; ಮೊದಲ ಆದ್ಯತೆ ಆರೋಗ್ಯ ಕಾರ್ಯಕರ್ತರಿಗೆ
ಬಿಬಿಎಂಪಿ ವ್ಯಾಪ್ತಿಯ 224 ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಂಗ್ರಹ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ(ಪಿಎಚ್ಸಿ) ಮೂಲಕ ಕೊರೋನಾ ಲಸಿಕೆ ವಿತರಣೆ ಮಾಡಲಾಗುತ್ತದೆ.
ಬೆಂಗಳೂರು(ಡಿ.15): ಮಾರಕ ಕೊರೋನಾ ವೈರಸ್ಗೆ ಕಂಡು ಹಿಡಿಯಲಾಗಿರುವ ಲಸಿಕೆಯನ್ನು ಕೇಂದ್ರ ಸರ್ಕಾರದ ಸೂಚನೆಯಂತೆ ವಿತರಣೆ ಮಾಡಲು ಕರ್ನಾಟಕ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಚುನಾವಣಾ ಬೂತ್ ಮಾದರಿಯಲ್ಲಿ ಕೊರೋನಾ ಲಸಿಕೆ ವಿತರಿಸಲು ಚಿಂತಿಸಲಾಗಿದೆ. ರಾಜ್ಯಾದ್ಯಂತ 29,451 ಲಸಿಕೆ ವಿತರಣೆ ಕೇಂದ್ರಗಳು, 10 ಸಾವಿರ ವ್ಯಾಕ್ಸಿನೇಟರ್ ಸಿಬ್ಬಂದಿಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಒಟ್ಟು 2,855 ಕೋಲ್ಡ್ ಚೇನ್ ಕೇಂದ್ರಗಳಿವೆ. ರಾಜ್ಯದ ಆರೋಗ್ಯ, ಮೆಡಿಕಲ್ ಕಾಲೇಜು ಸಹಿತ ಪಶು ಸಂಗೋಪನೆ ಇಲಾಖೆ ಮತ್ತು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳನ್ನು ಬಳಸಲು ನಿರ್ಧರಿಸಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿಯೂ ಕೊರೋನಾ ಲಸಿಕೆ ವಿತರಣೆಗೆ ಬಿಬಿಎಂಪಿ ಸಿದ್ಧತೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಎರಡು ಕಡೆ ಪ್ರಮುಖ ಲಸಿಕೆ ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬಿಬಿಎಂಪಿ ಬೆಂಗಳೂರು ನಗರ ವ್ಯಾಪ್ತಿಗೆ ದಾಸಪ್ಪ ಆರೋಗ್ಯ ಆಸ್ಪತ್ರೆ,
ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯೇತರಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯನ್ನು ಗೊತ್ತು ಮಾಡಲಾಗಿದೆ. ಈ ಎರಡು ಪ್ರಮುಖ ಕೇಂದ್ರಗಳಲ್ಲಿ ಪ್ರಮುಖ ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಬೆಂಗಳೂರಿನಲ್ಲಿ 180 ಕೇಂದ್ರಗಳನ್ನು ಕೋಲ್ಡ್ ಸ್ಟೋರೇಜ್(Ice Line Refrigerator) ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 224 ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಂಗ್ರಹ ಮಾಡಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ(ಪಿಎಚ್ಸಿ) ಮೂಲಕ ಕೊರೋನಾ ಲಸಿಕೆ ವಿತರಣೆ ಮಾಡಲಾಗುತ್ತದೆ.
ಕೊರೋನಾ ಲಸಿಕೆ ಸಂಗ್ರಹ ಸಿದ್ಧತೆ ಹಿನ್ನೆಲೆ, ಇಂದಿನಿಂದ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ. ತಜ್ಞ ವೈದ್ಯರು, ವೈದ್ಯರು, ಅರೆ ವೈದ್ಯರು, ಆಶಾ ಕಾರ್ಯಕರ್ತರಿಗೂ ತರಬೇತಿ ಕೊಡಲಾಗುತ್ತಿದೆ. ಕೊರೋನಾ ಲಸಿಕೆ ಸಂಗ್ರಹ, ಯಾರಿಗೆ ಲಸಿಕೆ ಹಾಕಬೇಕು ಎನ್ನುವ ಕುರಿತು ಮಾಹಿತಿ ನೀಡುವುದರ ಜೊತೆಗೆ, ಜಾಗೃತಿ ಮೂಡಿಸಲಾಗುತ್ತಿದೆ.
ಇನ್ನು, ಆದ್ಯತೆಯ ಮೇರೆಗೆ ಕೊರೋನಾ ಲಸಿಕೆ ವಿತರಣೆ ಮಾಡಲು ಚಿಂತಿಸಲಾಗಿದೆ. ಮೊದಲ ಆದ್ಯತೆ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಆದ್ಯತೆ ಕೊರೋನಾ ವಾರಿಯರ್ಸ್ಗೆ, ಹಿರಿಯ ನಾಗರಿಕರಿಗೆ ಮೂರನೇ ಆದ್ಯತೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 2.24 ಲಕ್ಷ ಆರೋಗ್ಯ ಕಾರ್ಯಕರ್ತರಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ 75 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ.