Facebook Fuel for India 2020 – ಫೇಸ್​ಬುಕ್ ಫುಯೆಲ್ ಮೊದಲ ಆವೃತ್ತಿ ಆರಂಭ; ಎರಡು ದಿನ ಕಾರ್ಯಕ್ರಮ

ಫೇಸ್​ಬುಕ್ ಕುಟುಂಬದ ಉತ್ಪನ್ನಗಳು ಮತ್ತು ಯೋಜನೆಗಳ ಮೂಲಕ ಭಾರತದಲ್ಲಿ ಆಗಿರುವ, ಆಗುವ ಬದಲಾವಣೆಗಳ ನಿದರ್ಶನಗಳನ್ನ ತಿಳಿಸುವ ಉದ್ದೇಶದಿಂದ Facebook Fuel For India 2020 ವಾರ್ಷಿಕ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.

ನವದೆಹಲಿ(ಡಿ. 15): ಭಾರತದಲ್ಲಿ ಫೇಸ್​ಬುಕ್​ನ ಯೋಜನೆಗಳನ್ನ ವಿಶದಪಡಿಸುವ ಉದ್ದೇಶದಿಂದ ಆ ಸಂಸ್ಥೆ ಈ ವರ್ಷದಿಂದ ವಾರ್ಷಿಕ ಸಂವಾದ ಕಾರ್ಯಕ್ರಮವನ್ನ ಪ್ರಾರಂಭಿಸಿದೆ. Facebook Fuel for India 2020 – ಫೇಸ್​ಬುಕ್ ಫುಯೆಲ್ ಫಾರ್ ಇಂಡಿಯಾ ಎಂಬ ಈ ವಾರ್ಷಿಕ ಕಾರ್ಯಕ್ರಮ ಮೊದಲ ಆವೃತ್ತಿಯಾಗಿದೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ. ಫೇಸ್​ಬುಕ್ ಕುಟುಂಬದ ಉತ್ಪನ್ನಗಳು ಮತ್ತು ಯೋಜನೆಗಳ ಮೂಲಕ ಭಾರತದಲ್ಲಿ ಆಗಿರುವ ಬದಲಾವಣೆಗಳ ನಿದರ್ಶನಗಳನ್ನ ಈ ಸಂದರ್ಭದಲ್ಲಿ ಹೈಲೈಟ್ ಮಾಡಲಾಗುತ್ತದೆ. ತಂತ್ರಜ್ಞಾನ, ವ್ಯವಹಾರ ಜಗತ್ತಿನ ದಿಗ್ಗಜರು ಈ ವಾರ್ಷಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಫೇಸ್​ಬುಕ್ ಸಿಇಒ ಮಾರ್ಕ್ ಝುಕರ್​ಬರ್ಗ್, ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ, ರಿಲಾಯನ್ಸ್ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, ಇಶಾ ಅಂಬಾನಿ, ಸ್ಯಾಮ್ಸುಂಗ್ ಸಂಸ್ಥೆಯ ಅಸಿಮ್ ವಾರ್ಸಿ, MyGov ಸಿಇಒ ಅಭಿಷೇಕ್ ಸಿಂಗ್, The Moms Co ಸಂಸ್ಥಾಪಕಿ ಮಲಿಕಾ ಸದನಿ, ಅನ್ ಅಕಾಡೆಮಿ ಸಿಇಒ ಗೌರವ್ ಮುಂಜಲ್ ಮೊದಲಾದ ಗಣ್ಯರು ಭಾಷಣ ಮಾಡುತ್ತಿದ್ದಾರೆ. ಫೇಸ್​ಬುಕ್​ನಿಂದ ಸಿಇಒ ಮಾರ್ಕ್ ಝುಕರ್​ಬರ್ಗ್ ಸೇರಿದಂತೆ ಆ ಸಂಸ್ಥೆಯ ಸೋದರ ಸಂಸ್ಥೆಗಳ ಅನೇಕ ಹಿರಿಯ ಅಧಿಕಾರಿಗಳು ಸಂವಾದ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುತ್ತಿದ್ಧಾರೆ.

ಸಾಮಾಜಿಕ ಒಳಿತಿಗಾಗಿ ಡಿಜಿಟಲ್ ಸಾಧನಗಳ ಬಳಕೆ, ಡಿಜಿಟಲ್ ಪ್ಲಾಟ್​ಫಾರ್ಮ್​ಗಳ ಮೂಲಕ ಪಾರದರ್ಶಕವಾಗಿ ದೇಣಿಗೆ ಸಂಗ್ರಹ, ಡಿಜಿಟಲ್ ಸಾಧನಗಳ ಮೂಲಕ ಮಹಿಳಾ ಉದ್ದಿಮೆದಾರರಿಗೆ ಪ್ರೋತ್ಸಾಹ, ವಾಟ್ಸಾಪ್ ಇನ್ಸ್​ಟಾಗ್ರಾಮ್ ಮೊದಲಾದ ಪ್ಲಾಟ್​ಫಾರ್ಮ್​ಗಳಿಂದ ಡಿಜಿಟಲ್ ಒಳಗೊಳ್ಳುವಿಕೆ ಇತ್ಯಾದಿ ವಿಚಾರಗಳನ್ನ ಭಾರತೀಯ ಸಮುದಾಯದ ದೃಷ್ಟಿಯಲ್ಲಿ ಮಂಡಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕಾಗಿಯೇ ಪ್ರತ್ಯೇಕ ವೆಬ್​ಸೈಟ್ ಮಾಡಲಾಗಿದ್ದು, ಅದರಲ್ಲಿ ಕಾರ್ಯಕ್ರಮದ ಎಲ್ಲಾ ಸೆಷೆನ್​ಗಳ ಭಾಷಣ, ಸಂವಾದಗಳನ್ನ ವೀಕ್ಷಿಸಬಹುದಾಗಿದೆ. ಹಾಗೆಯೇ, ಅಧಿಕೃತ ಫೇಸ್​ಬುಕ್ ಪೇಜ್​ನಲ್ಲಿ ಪ್ರಮುಖ ಅಂಶಗಳಿರುವ ದೃಶ್ಯಗಳನ್ನ ನೋಡಬಹುದಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *