ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಚರ್ಚೆಗೆ ಅವಕಾಶ ನೀಡದಿರಲು ಕಾಂಗ್ರೆಸ್ ನಿರ್ಧಾರ
ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದೆ
ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆಗೆ ಯಾವುದೇ ಅವಕಾಶ ನೀಡದಂತೆ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದೆ.
ವಿಧಾನ ಪರಿಷತ್ ಸಭಾಪತಿ ವಿರುದ್ಧ ಬಿಜೆಪಿ ಸಲ್ಲಿಸಿದ ಅವಿಶ್ವಾಸ ನಿರ್ಣಯದ ಪ್ರಸ್ತಾಪವನ್ನು ಸಭಾಪತಿಗಳು ಈಗಾಗಲೇ ತಿರಸ್ಕರಿಸಿರುವುದರಿಂದ ಆ ವಿಷಯದ ಮೇಲೆ ಚರ್ಚೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಅವಕಾಶ ನೀಡದಂತೆ ಸದನದಲ್ಲಿ ಆಗ್ರಹಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಈ ಕುರಿತು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ವಿಧಾನ ಪರಿಷತ್ ನ ಅಧಿವೇಶನ ಅನಿರ್ದಿಷ್ಟಾವಧಿ ಮುಂದೂಡಲಾಗಿದೆ. ಆದರೂ, ಬಿಜೆಪಿಯವರು ಮತ್ತೆ ಒಂದು ದಿನದ ಅಧಿವೇಶನ ಕರೆಯುವಂತೆ ಮಾಡಿದ್ದಾರೆ. ವಿಧಾನ ಪರಿಷತ್ ನಿಯಮ 165 ರ ಅಡಿಯಲ್ಲಿ ಸಭಾಪತಿಗಳು ಪಕ್ಷಪಾತ ಮಾಡಿದ್ದಾರೆ ಎಂದು ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಆದರೆ ಸಭಾಪತಿಗಳು ಅವರ ಸೂಚನೆ ನಿಯಮದ ಪ್ರಕಾರ ಇಲ್ಲ ಎಂದು ತಿರಸ್ಕರಿಸಿದ್ದಾರೆ. ಅಲ್ಲದೆ, ಇದನ್ನು ನೊಟೀಸ್ ನೀಡಿದ್ದ ಸದಸ್ಯರಿಗೆ ಹಿಂಬರಹದಲ್ಲಿ ತಿಳಿಸಲು ನಮೂದಿಸಿದ್ದಾರೆ ಎಂದು ಹೇಳಿದರು.
ಈ ಮಧ್ಯೆ, ನಾಳೆ ಕಲಾಪದಲ್ಲಿ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಬಿಜೆಪಿ ತಯಾರಿ ನಡೆಸಿದೆ. ಸರ್ಕಾರ ತಮಗಿರುವ ಎಲ್ಲಾ ಕಾನೂನು ಹಾಗೂ ತಾಂತ್ರಿಕ ಅಂಶ ಆಧಾರದಲ್ಲಿ ಸಭಾಪತಿ ವಿರುದ್ಧ ತೊಡೆತಟ್ಟಿದ್ದು, ಇದು ಸಾಂವಿಧಾನಿಕ ಬಿಕ್ಕಟ್ಟಿಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ.
ಡಿಸೆಂಬರ್ 7ರಿಂದ ಆರಂಭವಾದ ವಿಧಾನಸಭೆ ಚಳಿಗಾಲದ ಅಧಿವೇಶನ ಡಿಸೆಂಬರ್ 10ರಂದು ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿತ್ತು. ಗೋಹತ್ಯೆ ವಿಧೇಯಕ ಮಸೂದೆ ಮಂಡನೆಗೆ ಅವಕಾಶ ಮಾಡಿಕೊಡದ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಬಿಜೆಪಿ ಮುಂದಾಗಿತ್ತು. ಆದರೆ ಅವಿಶ್ವಾಸ ನಿರ್ಣಯವನ್ನು ತಾಂತ್ರಿಕ ಹಾಗೂ ಕಾನೂನಾತ್ಮಕ ಕಾರಣಗಳಿಂದ ಸಭಾಪತಿ ಅವರು ತಿರಸ್ಕರಿಸಿದ್ದರು. ಈಗ ಮತ್ತೆ ಅವಿಶ್ವಾಸ ನಿರ್ಣಯ ಮಂಡಿಸಲು ಬಿಜೆಪಿ ಮುಂದಾಗಿದೆ.