Kukke Subrahmanya: ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಥೋತ್ಸವ ಹಿನ್ನೆಲೆ; ನಾಳೆಯಿಂದ ಡಿ. 20ರವರೆಗೆ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ

Kukke Subrahmanya Temple: ರಥೋತ್ಸವ ಇರುವುದರಿಂದ ಕೊರೋನಾ ಹರಡುವಿಕೆಯನ್ನು ತಡೆಯಲು ಡಿ. 17ರಿಂದ 20ವರೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

ಪುತ್ತೂರು (ಡಿ. 16): ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲೊಂದಾದ ಬೀದಿ ಉರುಳು ಸೇವೆಯು  ಸುಬ್ರಹ್ಮಣ್ಯದಲ್ಲಿ  ಸೋಮವಾರ ರಾತ್ರಿ ಲಕ್ಷ ದೀಪೋತ್ಸವದ ರಥೋತ್ಸವದ ಬಳಿಕ ಭಕ್ತರು ಆರಂಭಿಸಿದರು. ಮಂಗಳವಾರ ಮುಂಜಾನೆ ಮತ್ತು ಸಂಜೆ ಕೆಲವು ಭಕ್ತರು ಉರುಳು ಸೇವೆ ನೆರವೇರಿಸಿದ್ದಾರೆ. ಭಕ್ತರು ಇನ್ನು  ಷಷ್ಠಿಯಂದು ಮಹಾ ರಥೋತ್ಸವದಲ್ಲಿ ರಥವನ್ನು ಎಳೆಯುವ ತನಕ ಈ ಸೇವೆಯನ್ನು ನೆರವೇರಿಸುತ್ತಾರೆ. ರಥೋತ್ಸವ ಇರುವುದರಿಂದ ಕೊರೋನಾ ಹರಡುವಿಕೆಯನ್ನು ತಡೆಯಲು ಡಿ. 17ರಿಂದ 20ವರೆಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಯಾರು ಮೊದಲೇ ಪೂಜಾ ಸೇವೆಗೆ ತಮ್ಮ ಹೆಸರು ನೋಂದಾಯಿಸಿಕೊಂಡಿರುತ್ತಾರೋ ಅವರಿಗೆ ಮಾತ್ರ ಚೌತಿ, ಪಂಚಮಿ, ಷಷ್ಠಿಯಂದು ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು.

ಜಾತ್ರೋತ್ಸವದ ಪ್ರಧಾನ ದಿನವಾದ ಚೌತಿ, ಪಂಚಮಿಯಂದು ಅಧಿಕ ಸಂಖ್ಯೆಯಲ್ಲಿ ಭಕ್ತರು ಈ ಸೇವೆ ನೆರವೇರಿಸುತ್ತಾರೆ. ಸೋಮವಾರದಿಂದ ಮಂಗಳವಾರದವರೆಗೆ ಅನೇಕ ಭಕ್ತರು ಈಗಾಗಲೇ ತಮ್ಮ ಸೇವೆಯನ್ನು ನೆರವೇರಿಸಿದ್ದಾರೆ. ಕುಮಾರಧಾರಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿಂದ ರಾಜ ರಸ್ತೆ, ರಥಬೀದಿಯಲ್ಲಿ ಉರುಳಿಕೊಂಡು ದೇವಾಲಯಕ್ಕೆ ಬಂದು ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿ, ಮೂಡು ಬಾಗಿಲಿನಲ್ಲಿ ಹೊರ ಹೋಗಿ, ಎದುರಿನ ದರ್ಪಣ ತೀರ್ಥ ನದಿಯಲ್ಲಿ ಸ್ನಾನ ಮಾಡಿ ಬಂದು, ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಈ ಸೇವೆಗೆ ಯಾವುದೇ ರಶೀದಿ ಇಲ್ಲದಿದ್ದರೂ ಭಕ್ತರಿಗೆ ದೇವಾಲಯದಿಂದ ಸಕಲ ಅನುಕೂಲತೆಗಳನ್ನು ಮಾಡಲಾಗಿದೆ.

ಈ ಬಾರಿ ಉರುಳು ಸೇವೆ ಮಾಡುವ ಭಕ್ತರಿಗೆ ಪ್ರತ್ಯೇಕ ಪಥದ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರಾದಿಂದ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಿತವಾಗಿರುವ ಕಾರಣ ಇದರಲ್ಲಿ ಒಂದು ಭಾಗವನ್ನು ಉರುಳು ಸೇವೆಗಾಗಿಯೇ ಈ ಬಾರಿ ವ್ಯವಸ್ಥೆಗೊಳಿಸಲಾಗಿದೆ. ಇದರಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಅಲ್ಲದೆ, ರಸ್ತೆಯುದ್ದಕ್ಕೂ ಅಲ್ಲಲ್ಲಿ ಸೂಚನಾ ಫಲಕಗಳನ್ನು ಹಾಕಲಾಗಿದೆ. ಸೋಮವಾರದಿಂದ ಮುಂದಿನ ಭಾನುವಾರದ ತನಕ ಕುಮಾರಧಾರಾದಿಂದ ಕುಕ್ಕೆಯ ತನಕ ವಿದ್ಯುತ್ ಸೌಕರ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ಅಲ್ಲದೆ, ದೇವಾಲಯದಿಂದ ಪ್ರತಿನಿತ್ಯ ರಸ್ತೆಯನ್ನು ಗುಡಿಸಿ, ಸ್ವಚ್ಛ ಮಾಡಿ ರಸ್ತೆಯಲ್ಲಿನ ಧೂಳು ತೆಗೆಯುವ ಕಾರ್ಯ ನಡೆಯುತ್ತಿದೆ.

ಈ ಬಾರಿ ಕಾಂಕ್ರೀಟ್ ರಸ್ತೆಯಲ್ಲಿ ಉರುಳು ಸೇವೆ ಮಾಡಬೇಕಾದ ಕಾರಣ ಭಕ್ತರು ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಒಳಗೆ ಸೇವೆಯನ್ನು ಆರಂಭಿಸಿ ಸಹಕರಿಸಲು ದೇವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ. ಆದಷ್ಟು ಸಂಜೆ, ರಾತ್ರಿ ಮತ್ತು ಮುಂಜಾನೆ ವೇಳೆ ಸೇವೆಯನ್ನು ಕುಮಾರಧಾರೆಯಿಂದ ಆರಂಭಿಸಬೇಕು ಎಂದು  ದೇವಳದ ಆಡಳಿತಾಧಿಕಾರಿಗಳು ಸೇವಾರ್ಥಿಗಳಲ್ಲಿ ವಿನಂತಿಸಿದ್ದಾರೆ. ಕುಮಾರಧಾರಾದಿಂದ ಸುಬ್ರಹ್ಮಣ್ಯದತನಕ ಸೇವೆ ನೆರವೇರಿಸುವಾಗ ಬಿಸಿಲಿನ ತಾಪದಿಂದ ಭಕ್ತರಿಗೆ ತೊಂದರೆ ಆಗಬಾರದು ಎಂಬ ಮುಂದಾಲೋಚನೆಯಿಂದ ಆಡಳಿತಾಧಿಕಾರಿಗಳು ಈ ಮನವಿಯನ್ನು ಮಾಡಿದ್ದಾರೆ.

ಉರುಳು ಸೇವೆ ಮಾಡುವವರು ಮೊದಲೇ ಅನೇಕ ದಿನಗಳಿಂದ ವೃತವನ್ನು ಕೈಗೊಂಡಿರುತ್ತಾರೆ. ಅತ್ಯಂತ ಕಠಿಣವಾದ ಈ ಸೇವೆಯಲ್ಲಿ ಭಕ್ತರ ಅಪಾರ ಶ್ರದ್ಧೆ ಅಡಗಿದೆ. ಸುಮಾರು 2 ಕಿ.ಮೀ ದೂರ ಕಠಿಣವಾದ ಉರುಳು ಸೇವೆ ಮಾಡಿ ತಮ್ಮ ಇಷ್ಟಾರ್ಥ ಫಲಪ್ರದವಾಗಲು ಪ್ರಾರ್ಥಿಸುತ್ತಾರೆ.  ದೇವರನ್ನು ಆರಾಧಿಸುವ ಕಠಿಣ ಹಾಗೂ ವಿಶಿಷ್ಟ ಸೇವೆ ಇದಾಗಿದ್ದು, ಪುರುಷ, ಮಹಿಳೆ, ಮಕ್ಕಳು ಹಾಗೂ ವೃದ್ದರೂ ಈ ಸೇವೆಯನ್ನು ಮಾಡುವುದು ಇಲ್ಲಿನ ವಿಶೇಷತೆಯಾಗಿದೆ. ಅನೇಕ ವರ್ಷಗಳಿಂದ ಸತತವಾಗಿ ಈ ಕಠಿಣವಾದ ಸೇವೆಯನ್ನು ಸಲ್ಲಿಸುವ ಅಸಂಖ್ಯಾತ ಭಕ್ತರು ಕುಕ್ಕೆ ಸುಬ್ರಹ್ಮಣ್ಯದಲ್ಲಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *