RN Shetty Death: ಖ್ಯಾತ ಉದ್ಯಮಿ ಆರ್ಎನ್ ಶೆಟ್ಟಿ ಹೃದಯಾಘಾತದಿಂದ ನಿಧನ; ಸಿಎಂ ಯಡಿಯೂರಪ್ಪ ಸಂತಾಪ
RN Shetty Death: ಆರ್.ಎನ್. ಶೆಟ್ಟಿ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರವನ್ನು ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದರು.
ಬೆಂಗಳೂರು (ಡಿ. 17): ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದ್ದ ಖ್ಯಾತ ಉದ್ಯಮಿ ಆರ್.ಎನ್. ಶೆಟ್ಟಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಆರ್.ಎನ್.ಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರೂ ಆಗಿರುವ ಆರ್.ಎನ್. ಶೆಟ್ಟಿ ಅವರಿಗೆ 92 ವರ್ಷವಾಗಿತ್ತು. ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಆರ್ಎನ್ಎಸ್ ತಾಂತ್ರಿಕ ವಿದ್ಯಾಲಯ ಕಾಲೇಜಿನ ಆವರಣದಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗುವುದು.
1928ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರುಡೇಶ್ವರದಲ್ಲಿ ಹುಟ್ಟಿದ ಆರ್.ಎನ್. ಶೆಟ್ಟಿ ಉದ್ಯಮಿಯಾಗಿ ಯಶಸ್ವಿಯಾದರು. ತಮ್ಮ ಹುಟ್ಟೂರಾದ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಬೃಹತ್ ಶಿವನ ಮೂರ್ತಿ, ಎತ್ತರದ ರಾಜಗೋಪುರವನ್ನು ಸ್ಥಾಪಿಸಿ, ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಆ ಜಾಗವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಿದ ಹೆಗ್ಗಳಿಕೆಯೂ ಆರ್.ಎನ್. ಶೆಟ್ಟಿ ಅವರದ್ದೇ.
ಆರ್.ಎನ್. ಶೆಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಕೃಷಿಕ ಮನೆತನದಲ್ಲಿ ಹುಟ್ಟಿದ ಆರ್.ಎನ್. ಶೆಟ್ಟಿ ಅವರು ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿ, ಹೋಟೆಲ್ ಉದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಜೊತೆಗೆ ಶಿಕ್ಷಣ ಕ್ಷೇತ್ರಕ್ಕೂ ತಮ್ಮ ಕೊಡುಗೆ ನೀಡಿದ್ದರು. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬಸ್ಥರಿಗೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿರಸಿಯಲ್ಲಿ ಗುತ್ತಿಗೆದಾರರಾಗಿ ಕೆಲಸ ಆರಂಭಿಸಿದ ಆರ್.ಎನ್. ಶೆಟ್ಟಿ ಬಳಿಕ ಆರ್ಎನ್ ಶೆಟ್ಟಿ ಆ್ಯಂಡ್ ಕಂಪನಿ ಎಂಬ ಕಂಪನಿಯನ್ನು 1967ರಲ್ಲಿ ಸ್ಥಾಪಿಸಿದರು. ಆ ಕಂಪನಿಯ ಪಾಲುದಾರರಾಗಿದ್ದ ಆರ್ಎನ್ ಶೆಟ್ಟಿ ಅದರ ಮೂಲಕ ಹೊನ್ನಾವರ-ಬೆಂಗಳೂರು ರಸ್ತೆಯ ಸೇತುವೆ ನಿರ್ಮಿಸಿದರು. ನಂತರ ಹಿಡಕಲ್ ಜಲಾಶಯ, ಸೂಪ ಜಲಾಶಯ, ಗೇರುಸೊಪ್ಪ, ಮಾಣಿ ಡ್ಯಾಂ, ವರಾಹಿ ಡ್ಯಾಂ ಮುಂತಾದ ಯೋಜನೆಗಳ ಜೊತೆ ಕೈಜೋಡಿಸಿದರು. ಮಾರುತಿ ಉದ್ಯೋಗ್ ಲಿಮಿಟೆಡ್, ಆರ್ಎನ್ಎಸ್ ಮೋಟಾರ್ಸ್, ಮುರುಡೇಶ್ವರ ಸೆರೆಮಿಕ್ಸ್, ನವೀನ್ ಹೋಟೆಲ್ ಲಿಮಿಟೆಡ್ ಸ್ಥಾಪಿಸಿ, ಉದ್ಯಮ ಕ್ಷೇತ್ರದಲ್ಲಿ ಆರ್.ಎನ್. ಶೆಟ್ಟಿ ಖ್ಯಾತ ಪಡೆದರು.
ಆರ್ಎನ್ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾಪಿಸಿ ಶಿಕ್ಷಣ ರಂಗದಲ್ಲಿಯೂ ತಮ್ಮದೇ ಛಾಪು ಮೂಡಿಸಿದ ಆರ್ಎನ್ ಶೆಟ್ಟಿ ಅವರಿಗೆ 7 ಜನ ಮಕ್ಕಳು. ಮಂಗಳೂರು ಟೈಲ್ಸ್ ತಯಾರಿಸುವ ಘಟಕ ಆರಂಭಿಸಿ ಸಾವಿರಾರು ಸ್ಥಳೀಯರಿಗೆ ಕೆಲಸ ಒದಗಿಸಿದರು. ದಿನಕ್ಕೆ 40,000 ಹೆಂಚುಗಳನ್ನು ತಯಾರಿಸುವ ಮಂಗಳೂರು ಟೈಲ್ಸ್ ಘಟಕ ಕರ್ನಾಟಕದ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ.
ಬೆಂಗಳೂರಿನಲ್ಲಿ ಫೈವ್ ಸ್ಟಾರ್ ಹೋಟೆಲ್ ನಿರ್ಮಿಸಿ, ಅದನ್ನು ತಾಜ್ ಗ್ರೂಪ್ನವರಿಗೆ ಲೀಸ್ಗೆ ಕೊಟ್ಟರು. ಅದನ್ನು ತಾಜ್ ರೆಸಿಡೆನ್ಸಿ ಎಂದು ಕರೆಯಲಾಗುತ್ತದೆ. ಕೈಗಾರಿಕೆ, ಹೋಟೆಲ್ ಉದ್ಯಮ, ಶಿಕ್ಷಣ ಕ್ಷೇತ್ರ ಮುಂತಾದ ಹಲವು ಕ್ಷೇತ್ರಗಳಲ್ಲಿ ಆರ್.ಎನ್. ಶೆಟ್ಟಿ ಪ್ರಸಿದ್ಧಿ ಪಡೆದಿದ್ದಾರೆ.