BS Yeddyurappa: ರಾಜ್ಯ ಸಂಪುಟ ವಿಸ್ತರಣೆ ವಿಳಂಬದ ನಡುವೆಯೂ 13 ಶಾಸಕರಿಗೆ ನಿಗಮ-ಮಂಡಳಿ ಕ್ಯಾಬಿನೆಟ್ ದರ್ಜೆಯ ಸ್ಥಾನ
ಸಂಪುಟ ಸಭೆಯಲ್ಲಿ ಯಾವುದೇ ಸ್ಥಾನಮಾನ ಲಭ್ಯವಾಗದ ಬಿಜೆಪಿ ಶಾಸಕರನ್ನು ಗುರುತಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು 13 ಶಾಸಕರನ್ನು ರಾಜ್ಯ ಆಡಳಿತ ಮಂಡಳಿಗಳು ಮತ್ತು ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಈ ಶ್ರೇಣಿಯು ಕ್ಯಾಬಿನೆಟ್ ಮಂತ್ರಿಯ ಸ್ಥಾನಕ್ಕೆ ಸಮನಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬೆಂಗಳೂರು (ಡಿಸೆಂಬರ್ 17); ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕಳೆದ ಒಂದು ವರ್ಷದಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಎಷ್ಟೇ ಪ್ರಯತ್ನಿಸಿದರು ಸಾಧ್ಯವಾಗುತ್ತಿಲ್ಲ. ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸಿಗದ ಕಾರಣ ರಾಜ್ಯ ಸಂಪುಟ ವಿಸ್ತರಣೆ ಎಂಬುದು ಹುಲಿ ಬಂತು ಹುಲಿ ಎಂಬಂತಾಗಿದೆ. ಈ ನಡುವೆ ಸಚಿವಾಕಾಂಕ್ಷಿಗಳು ಅಸಮಾಧಾನಕ್ಕೆ ಒಳಗಾಗಿದ್ದು, ಪ್ರತಿದಿನ ಸಿಎಂ ಮನೆಗೆ ಎಡತಾಕುತ್ತಿದ್ದಾರೆ. ಹೀಗಾಗಿ ಸಂಪುಟ ವಿಸ್ತರಣೆ ವಿಳಂಬದ ನಡುವೆ ಸಚಿವ ಸ್ಥಾನ ಆಕಾಂಕ್ಷಿಗಳನ್ನು ಸಮಾಧಾನಪಡಿಸುವ ಸಲುವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ 13 ಜನ ಬಿಜೆಪಿ ಶಾಸಕರಿಗೆ ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಸ್ಥಾನವನ್ನು ಬುಧವಾರ ನೀಡಿ ಆದೇಶಿಸಿದ್ದಾರೆ. ಅಲ್ಲದೆ, ನಾಲ್ವರಿಗೆ ರಾಜ್ಯ ದರ್ಜೆಯ ಸ್ಥಾನಮಾನ ನೀಡಲಾಗಿದೆ.
ಸಂಪುಟ ಸಭೆಯಲ್ಲಿ ಯಾವುದೇ ಸ್ಥಾನಮಾನ ಲಭ್ಯವಾಗದ ಬಿಜೆಪಿ ಶಾಸಕರನ್ನು ಗುರುತಿಸುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು 13 ಶಾಸಕರನ್ನು ರಾಜ್ಯ ಆಡಳಿತ ಮಂಡಳಿಗಳು ಮತ್ತು ನಿಗಮಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಈ ಶ್ರೇಣಿಯು ಕ್ಯಾಬಿನೆಟ್ ಮಂತ್ರಿಯ ಸ್ಥಾನಕ್ಕೆ ಸಮನಾಗಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
14 ನೇ ನೇಮಕಾತಿಯಾಗಿ ನಿವೃತ್ತ ಮಾಹಿತಿ ವಿಭಾಗದ ಅಧಿಕಾರಿಯೊಬ್ಬರನ್ನು ಸಿಎಂ ಅವರ ಮಾಧ್ಯಮ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿರುವುದು ವಿಶೇಷ. ಕ್ಯಾಬಿನೆಟ್ ಶ್ರೇಣಿಯೊಂದಿಗೆ ಇತರ ನಾಲ್ವರು ಶಾಸಕರನ್ನು ಇತರ ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕ ಮಾಡಲಾಗಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಮುಖ್ಯಸ್ಥರಾಗಿ ನೇಮಕ ಮಾಡುವಂತೆ ಪಟ್ಟು ಹಿಡಿದಿದ್ದ ತೆರದಾಳ ಶಾಸಕ ಸಿದ್ದು ಸವದಿ ಅವರಿಗೆ ಅದೇ ಸ್ಥಾನವನ್ನು ನೀಡಲಾಗಿದೆ. ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮುನ್ಸಿಪಲ್ ಕೌನ್ಸಿಲ್ ಸದಸ್ಯೆಯ ಮೇಲೆ ಇತ್ತೀಚೆಗೆ ಶಾಸಕ ಸಿದ್ದು ಸವದಿ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಈ ವಿಡಿಯೋ ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಈ ಘಟನೆಯ ನಂತರ ಆ ಮಹಿಳೆ ಗರ್ಭಪಾತಕ್ಕೂ ಒಳಗಾಗಿದ್ದರು.
ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕ್ಯಾಬಿನೆಟ್ನಲ್ಲಿ ಈಗಾಗಲೇ 27 ಜನ ಸಚಿವರಿದ್ದಾರೆ. ಆದರೆ, ಕ್ಯಾಬಿನೆಟ್ನಲ್ಲಿ 34 ಸಚಿವರನ್ನು ಹೊಂದುವ ಅವಕಾಶ ಇದ್ದು, ಕ್ಯಾಬಿನೆಟ್ ವಿಸ್ತರಣೆಗಾಗಿ ಬಿಎಸ್ವೈ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಆದರೆ, ಈವರೆಗೆ ಅದು ಸಾಧ್ಯವಾಗುತ್ತಿಲ್ಲ. ಈ ನಡುವೆ ಮೂಲ ಬಿಜೆಪಿಗರು ಮತ್ತು ವಲಸಿಗರ ನಡುವೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿರುವುದು ಸಹ ಯಡಿಯೂರಪ್ಪ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.