ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಹೊರ ನಡೆದ ರಾಹುಲ್ ಗಾಂಧಿ
ದೇಶದ ರಕ್ಷಣೆ ಕುರಿತ ಪ್ರಮುಖ ವಿಷಯ ಚರ್ಚಿಸುವ ಬದಲು ಸೇನಾ ಸಮವಸ್ತ್ರದ ಕುರಿತು ಚರ್ಚಿಸುತ್ತಾ ಕಾಲಹರಣ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಸಭೆಯಿಂದ ಹೊರ ನಡೆದರು
ರಕ್ಷಣಾ ಸಂಸದೀಯ ಸಮಿತಿ ಸಭೆಯಿಂದ ಮಧ್ಯಭಾಗದಲ್ಲಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊರ ನಡೆದಿದ್ದಾರೆ. ಇವರ ಜೊತೆಗೆ ಕಾಂಗ್ರೆಸ್ ಸಂಸದರಾದ ರಾಜೀವ್ ಸತ್ವ ಹಾಗೂ ರೇವಂತ್ ರೆಡ್ಡಿ ಕೂಡ ಹೊರ ನಡೆದಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಸ್ಯೆ ಕುರಿತು ಚರ್ಚೆ ನಡೆಸುವ ಬದಲು ಸಶಸ್ತ್ರ ಪಡೆಗಳ ಸಮವಸ್ತ್ರ ಕುರಿತು ಚರ್ಚಿಸುವ ಮೂಲಕ ಸಮಯ ವ್ಯರ್ಥ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಭೆಯಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು ಲಡಾಖ್ ಗಡಿಯಲ್ಲಿ ಸೈನಿಕರನ್ನು ಸಿದ್ಧಗೊಳಿಸುವ ಕುರಿತು ಧ್ವನಿ ಎತ್ತದಂತೆ ಸಮಿತಿ ಮುಖ್ಯಸ್ಥ ಜುವಾಲ್ ಓರಾಮ್ ರಾಹುಲ್ ಗಾಂಧಿಗೆ ನಿರ್ಬಂಧಿಸಿದ್ದರು ಎನ್ನಲಾಗಿದೆ. ಈ ಕುರಿತು ಬಳಿಕ ನ್ಯೂಸ್ 18ಗೆ ಮಾತನಾಡಿದ ಓರಾಮ್ , ರಾಹುಲ್ ಗಾಂಧಿಯವರು ಕಾರ್ಯಸೂಚಿಯಲ್ಲಿ ಪಟ್ಟಿ ಮಾಡದಿರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಪಟ್ಟಿ ಮಾಡದ ವಿಷಯಗಳನ್ನು ಸಭೆಯಲ್ಲಿ ಕೇಳಿದಾಗ ಆ ಕುರಿತು ನನಗೆ ಕೇಳುವ ಹಕ್ಕಿದೆ ಎಂದು ಅವರು ತಿಳಿಸಿದ್ದಾರೆ.
ಭೂ, ವಾಯು ಹಾಗೂ ನೌಕ ಸೇನಾ ಸಮವಸ್ತ್ರಗಳ ಕುರಿತು ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸಮ್ಮುಖದಲ್ಲಿ ಚರ್ಚೆ ನಡೆಸಲಾಗುತ್ತಿತ್ತು. ಈ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ರಾಷ್ಟ್ರೀಯ ವಿಷಯಗಳ ಚರ್ಚಿಸುವ ಕುರಿತು ಪ್ರಸ್ತಾಪಿಸಿದರು. ಜೊತೆಗೆ ಲಡಾಖ್ನಲ್ಲಿ ಚೀನಾದ ವಿರುದ್ಧ ಹೋರಾಡಲು ಹೇಗೆ ಸೇನೆಯನ್ನು ಬಲಪಡಿಸಬೇಕು ಎಂಬ ಕುರಿತು ಧ್ವನಿ ಎತ್ತಿದ್ದರು.
ಈ ವೇಳೆ ರಾಹುಲ್ ಗಾಂಧಿಯವರಿಗೆ ಮಾತನಾಡದಲು ಸಮಿತಿ ಅಧ್ಯಕ್ಷರು ಅವಕಾಶ ನೀಡಲಿಲ್ಲ. ಈ ಹಿನ್ನಲೆ ಕಾಂಗ್ರೆಸ್ ನಾಯಕರು ಸಭೆಯಿಂದ ಹೊರ ನಡೆಯಲು ನಿರ್ಧರಿಸಿದರು ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಮತ್ತಿಬ್ಬರು ನಾಯಕರಾದ ಸತ್ವ ಹಾಗೂ ರೆಡ್ಡಿ ಕೂಡ ಅವರ ಹಾದಿ ಹಿಡಿದರು.
ಈ ಹಿಂದೆ ಕೂಡ ಹಿಮದ ಚಳಿಯಲ್ಲಿ ದೇಶವನ್ನು ಕಾಪಾಡುತ್ತಿರುವ ಸೈನಿಕರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ರಾಹುಲ್ ಗಾಂಧಿ ಧ್ವನಿ ಎತ್ತಿದ್ದರು. ಸಾಮಾನ್ಯ ಟೆಂಟ್ಗಳಲ್ಲಿ ವಿಪರೀತ ಚಳಿಯಲ್ಲಿಯೂ ಯಾವುದೇ ಅಂಜಿಕೆ ಇಲ್ಲದೇ ಸೈನಿಕರು ಪಿಎಲ್ಎ ಗಡಿ ಕಾಯುತ್ತಿದ್ದಾರೆ. ಆದರೆ ಪ್ರಧಾನ ಮಂತ್ರಿಯವರು 8,400 ಕೋಟಿ ರೂ ವೆಚ್ಚದಲ್ಲಿ ವಿಮಾನ ಹಾರಾಟ ನಡೆಸುತ್ತಾರೆ. ಚೀನಾದ ಹೆಸರೇಳಲು ಕೂಡ ಅವರು ಹೆದರುತ್ತಾರೆ. ಯಾರಿಗೆ ಉತ್ತಮ ದಿನ ಸಿಕ್ಕಿದೆ ಎಂದು ಅವರು ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು.