‘ನಿಮ್ಮ ಮಾತುಕತೆಗಳು ವಿಫಲವಾಗಿವೆ’: ಕೃಷಿ ಕಾಯ್ದೆ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆಗೆ ‘ಸುಪ್ರೀಂ’ ಚಿಂತನೆ!

ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಸಮೀಪ ನಡೆಯುತ್ತಿರುವ ರೈತರನ್ನು ತೆರವುಗೊಳಿಸಬೇಕೆಂದು ಸಲ್ಲಿಸಲಾಗಿದ್ದ ಪಿಐಎಲ್ ಸಂಬಂದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆಗೆ ಯೋಜಿಸಿದೆ.

ನವದೆಹಲಿ: ವಿವಾದಾತ್ಮಕ ಕೃಷಿ ಕಾನೂನುಗಳ ಕುರಿತು ರೈತರೊಂದಿಗೆ ಸರಕಾರ ನಡೆಸಿದ ಮಾತುಕತೆ ಮತ್ತೆ ಮತ್ತೆ ವಿಫಲವಾಗುತ್ತಿವ ಬಗ್ಗೆ ಕಳವಳ ವ್ಯಕ್ತಪಡಿಸಿದ  ಸುಪ್ರೀಂಕೋರ್ಟ್, ಕೇಂದ್ರ ಸರಕಾರದ ಪ್ರತಿನಿಧಿಗಳು ಹಾಗೂ ದೇಶಾದ್ಯಂತದ ರೈತ ಸಂಘಟನೆಗಳನ್ನು ಒಳಗೊಂಡಿರುವ ಸಮಿತಿ ರಚಿಸುವಂತೆ ಸಲಹೆ ನೀಡಿದೆ.

ರೈತರ ಪ್ರತಿಭಟನೆಯು ಶೀಘ್ರದಲ್ಲೇ ರಾಷ್ಟ್ರೀಯ ಸಮಸ್ಯೆಯಾಗಲಿದೆ ಹಾಗೂ ಮಾತುಕತೆಯ ಮೂಲಕ ಆದಷ್ಟು ಬೇಗನೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ರೈತರ ಪ್ರತಿಭಟನೆ ಪರವಾಗಿ ಹಾಗೂ ವಿರೋಧಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಜೊತೆಗೆ ದೆಹಲಿ, ಪಂಜಾಬ್, ಹರಿಯಾಣ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ ನಾಳೆಯೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.

ಸರಕಾರವು ಮಾತುಕತೆಗೆ ಸಿದ್ಧವಿದೆ. ರೈತರ ಪ್ರತಿಕ್ರಿಯೆ ಅತ್ಯಂತ ಮುಖ್ಯವಾಗಿದೆ. ನಾವು ರೈತರ ವಿರುದ್ದ ಏನನ್ನೂ ಮಾಡುವುದಿಲ್ಲ. ಮಾತುಕತೆಯು ಷರತ್ತು ಆಧಾರದಲ್ಲಿ ಇರುತ್ತದೆ. ವಿವಿಧ ಮಂತ್ರಿಗಳು ರೈತರೊಂದಿಗೆ ಈಗಾಗಲೆ ಮಾತನಾಡಿದ್ದಾರೆ. ಅವರು ಮಾತುಕತೆಗೆ ಬೆನ್ನು ತೋರಿಸಿದ್ದಾರೆ ಎಂದೂ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ತಿಳಿಸಿದೆ.

ಇದೊಂದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳು ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಿ ಎಂದು ಸೂಚಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ದೆಹಲಿಯ ಗಡಿಯನ್ನು ಬಂದ್ ಮಾಡಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು ಇದರಿಂದ ಪ್ರಯಾಣಿಕರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜೊತೆಗೆ ಸಾವಿರಾರೂ ಸಂಖ್ಯೆಯಲ್ಲಿ ರೈತರು ಸೇರಿರುವುದರಿಂದ ಮಹಾಮಾರಿ ಕೊರೋನಾ ಪ್ರಕರಣಗಳು ಹೆಚ್ಚಾಗಲು ಕಾರಣವಾಗಬಹುದು ಕೂಡಲೇ ರೈತರನ್ನು ಅಲ್ಲಿಂದ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *