ರೈತರ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಷಡ್ಯಂತ್ರಕ್ಕೆ ತಕ್ಕ ಉತ್ತರ ಕೊಡಿ; ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ
ಬೆಂಗಳೂರು: ರೈತರ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ. ಪಕ್ಷದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಅಭಿವೃದ್ಧಿ ಯೋಜನೆಗಳ ಕುರಿತು ತಿಳಿಸುವ ಮೂಲಕ ಈ ಷಡ್ಯಂತ್ರಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕೋರಮಂಗಲದ ಕಲಾದ್ವಾರಕ ಸಭಾಂಗಣದಲ್ಲಿ ಶನಿವಾರ ನಡೆದ “ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ”ಯಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಸತ್ಯಾಗ್ರಹ ನಡೆಸುತ್ತಿರುವವರು ಪ್ರಧಾನಿ ಕೈ ಮುಗಿದು ಕೇಳಿದರೂ ಮಾತುಕತೆಗೆ ಬರುತ್ತಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷದ ಪಿತೂರಿ ಇರುವುದೇ ಪ್ರತಿಭಟನೆಗೆ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ. ಅಧಿಕಾರ ಇಲ್ಲದ ಕಾರಣ ಕಾಂಗ್ರೆಸ್ಸಿಗರು ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ರೈತರ ಉತ್ಪನ್ನ ಖರೀದಿಗೆ ಮೋದಿ ಸರಕಾರವು ಆರು ವರ್ಷಗಳಲ್ಲಿ 8 ಲಕ್ಷ ಕೋಟಿ ರೂಪಾಯಿ ವ್ಯಯಸಿದೆ. ಆದರೆ, ಯುಪಿಎ ಸರಕಾರವು 10 ವರ್ಷಗಳಲ್ಲಿ 3.5 ಲಕ್ಷ ಕೋಟಿ ರೂಪಾಯಿಯನ್ನಷ್ಟೇ ಈ ಉದ್ದೇಶಕ್ಕೆ ಬಳಸಿತ್ತು. ದೇಶದ ಅತಿಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಉತ್ಪನ್ನಗಳ ಇಳುವರಿ ಹೆಚ್ಚಳ ಹಾಗೂ ಆದಾಯ ದುಪ್ಪಟ್ಟು ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುಪಯುಕ್ತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ನಮ್ಮದು ರೈತಪರ ಸರಕಾರ. ಕೃಷಿ, ಆರೋಗ್ಯ ಹಾಗೂ ಶಿಕ್ಷಣ ನಮ್ಮ ಆದ್ಯತೆಯಾಗಿದೆ. ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ. ಪಕ್ಷದ ಸಂಘಟನೆಗಾಗಿ ಹಳ್ಳಿ ಹಳ್ಳಿಗೆ ಸುತ್ತಾಡಿದ್ದೇನೆ. ಅದರ ಪರಿಣಾಮವಾಗಿ ಪಕ್ಷದ ಶಾಸಕರ ಸಂಖ್ಯೆಯೂ ಹೆಚ್ಚಾಗುತ್ತಾ ಸಾಗಿದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಮತ್ತು ಕೇಂದ್ರದಲ್ಲಿ ನಮ್ಮ ಪಕ್ಷದ್ದೇ ಸರಕಾರ ರಚನೆ ಸಾಧ್ಯವಾಗಿದೆ ಎಂದು ತಿಳಿಸಿದರು.
ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಕಾಯ್ದೆಯನ್ನು ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ. ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಕೇಂದ್ರ ಸರಕಾರವು ರೈತರಿಗೆ 6 ಸಾವಿರ ರೂಪಾಯಿ ನೀಡುತ್ತಿದ್ದು, ರಾಜ್ಯ ಸರಕಾರವು ಇದಕ್ಕೆ ಇನ್ನೂ 4 ಸಾವಿರ ರೂಪಾಯಿ ಸೇರಿಸಿ ಕೊಡುತ್ತಿದೆ. ಆರ್ಥಿಕ ಸಂಕಷ್ಟ ಇದ್ದರೂ ರೈತರಿಗೆ ನೆರವಾಗುವ ವಿಚಾರದಲ್ಲಿ ಸರಕಾರ ಮುಂಚೂಣಿಯಲ್ಲಿದೆ ಎಂದರು.
ರಾಜ್ಯದ ಕಾನೂನು ಸಚಿವ ಶ್ರೀ ಮಾಧುಸ್ವಾಮಿ ಅವರು ಮಾತನಾಡಿ, ಕೃಷಿಯಲ್ಲಿ ಹೂಡಿಕೆ ಹೆಚ್ಚಳದ ದೃಷ್ಟಿಯಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕೈಗಾರಿಕಾ ಸ್ಥಾಪನೆಗೆ ಇದ್ದ ಸಮಸ್ಯೆಗಳನ್ನೂ ಬಗೆಹರಿಸಲಾಗಿದೆ. ಕೇಂದ್ರ ಸರಕಾರವು ಹಿಂದಿನ ಯುಪಿಎ ಸರಕಾರ ಪ್ರಸ್ತಾಪಿಸಿದ್ದ ಕೃಷಿ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇದನ್ನು ಆ ಪಕ್ಷದ ಮುಖಂಡರು ಮರೆತು ರೈತರ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ ಎಂದರು.
ನಾವು ಎಪಿಎಂಸಿ ರದ್ದು ಮಾಡಿಲ್ಲ. ಇಷ್ಟ ಬಂದವರಿಗೆ ರೈತರ ಉತ್ಪನ್ನ ಮಾರಾಟ ಮಾಡುವ ಅವಕಾಶವನ್ನಷ್ಟೇ ನೀಡಿದ್ದೇವೆ ಹಾಗೂ ಆ ಮೂಲಕ ದಲ್ಲಾಳಿಗಳ ಕಪಿಮುಷ್ಟಿಯಿಂದ ರೈತರನ್ನು ಹೊರತಂದಿದ್ದೇವೆ ಎಂದು ಅವರು ತಿಳಿಸಿದರು.
ರಾಜ್ಯ ರೈತ ಮೋರ್ಚಾ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರೂ ಆದ ಶ್ರೀ ಈರಣ್ಣ ಕಡಾಡಿ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಚಿವ ಶ್ರೀ ಎಸ್.ಟಿ.ಸೋಮಶೇಖರ್, ಪದಾಧಿಕಾರಿಗಳು ಭಾಗವಹಿಸಿದ್ದರು.