ತಮಿಳುನಾಡು ಸರ್ಕಾರದಿಂದ ಭರ್ಜರಿ ಪೊಂಗಲ್ ಗಿಫ್ಟ್; ಜನರಿಗೆ 2500 ರೂ ನಗದು ಹಾಗೂ ಬಟ್ಟೆ ವಿತರಣೆ
ಕೊರೋನಾ ನಿಯಮಗಳ ಅನ್ವಯ ಸೂಕ್ತ ರಕ್ಷಣಾ ವ್ಯವಸ್ಥೆಯೊಂದಿಗೆ ಜನವರಿ 4 ರಿಂದ ಉಡುಗೊರೆಯ ವಿತರಣೆ ಆರಂಭವಾಗಲಿದೆ. 2.500 ನಗದು ಹಣದ ಜೊತೆಗೆ ಗಂಡಸರಿಗೆ ಧೋತಿ ಮತ್ತು ಹೆಣ್ಣುಮಕ್ಕಳಿಗೆ ಸೀರೆಯನ್ನೂ ವಿತರಿಸಲಾಗುವುದು ಎಂದು ಎಡಪ್ಪಾಡಿ ಪಳನಿಸ್ವಾಮಿ ಘೋಷಿಸಿದ್ದಾರೆ.
ಚೆನ್ನೈ (ಡಿಸೆಂಬರ್ 21); ತಮಿಳುನಾಡು ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಚುನಾವಣೆ ನಡೆಯುವುದು ಖಚಿತವಾಗಿದೆ. ಆಡಳಿತರೂಢ ಎಡಿಎಂಕೆ ಪಕ್ಷ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಮಹತ್ವಾಕಾಂಕ್ಷೆಯಲ್ಲಿದೆ. ಚುನಾವಣಾ ಪ್ರಚಾರವನ್ನೂ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಜನರಿಗೆ ಭರ್ಜರಿ ಗಿಫ್ಟ್ ಘೋಷಿಸಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ 2.06 ಕೋಟಿಗೂ ಅಧಿಕ ಜನರಿಗೆ 2.500 ರೂ ಪೊಂಗಲ್ ನಗದು ಉಡುಗೊರೆ ಹಾಗೂ ಹೊಸ ಬಟ್ಟೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಸರ್ಕಾರ ಚುನಾವಣೆ ಹಿನ್ನೆಲೆಯಲ್ಲಿ ಜನರಿಗೆ ಆಮಿಷವೊಡ್ಡುತ್ತಿದೆ ಎಂದು ಎಲ್ಲಾ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ.
ಎಡಿಎಂಕೆ ಭಾನುವಾರ ಸೇಲಂ ಜಿಲ್ಲೆಯಿಂದ ಚುನಾವಣಾ ಪ್ರಚಾರ ಅಭಿಯಾನ ಆರಂಭಿಸಿದೆ. ಈ ಅಭಿಯಾನದಲ್ಲಿ ಪೊಂಗಲ್ ಗಿಫ್ಟ್ ಘೋಷಿಸಿರುವ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ, ತಮಿಳುನಾಡಿನ ಜನರಿಗೆ ಹಬ್ಬದ ಉಡುಗೊರೆಯಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ಮನೆಗೆ ತಲಾ 2,500 ರೂ.ಗಳ ಪೊಂಗಲ್ ನಗದು ಉಡುಗೊರೆ ನೀಡುವುದಾಗಿ ಘೋಷಿಸಿದ್ದಾರೆ.
“ಪಿಡಿಎಸ್ ಸಿಬ್ಬಂದಿ ಪಡಿತರ ಚೀಟಿ ಹೊಂದಿರುವವರ ಮನೆ ಬಾಗಿಲಿಗೆ ಟೋಕನ್ ವಿತರಿಸುತ್ತಾರೆ. ಫಲಾನುಭವಿಗಳು ಪಿಡಿಎಸ್ ಮಳಿಗೆಗಳಿಂದ ಉಡುಗೊರೆ ಮತ್ತು ಹಣವನ್ನು ನಿಗದಿತ ದಿನಾಂಕಗಳಲ್ಲಿ ಸಂಗ್ರಹಿಸಬಹುದು. ಪ್ರತಿ ಉಡುಗೊರೆ ಕಿಟ್ ಜೊತೆಗೆ ಒಂದು ಕೆಜಿ ಅಕ್ಕಿ, ಒಂದು ಕೆಜಿ ಸಕ್ಕರೆ, ಕಬ್ಬಿನ ಜಲ್ಲೆ, 20 ಗ್ರಾಂ ಗೋಡಂಬಿ, 20 ಗ್ರಾಂ ಒಣ ದ್ರಾಕ್ಷಿ ಮತ್ತು 5 ಗ್ರಾಂ ಏಲಕ್ಕಿ ಇರುತ್ತದೆ” ಎಂದು ಅವರು ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಕೂಡ ರಾಜ್ಯ ಸರ್ಕಾರ ಪೊಂಗಲ್ ಹಬ್ಬಕ್ಕೆ 1,000 ರೂಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು
ತಮಿಳುನಾಡಿನಲ್ಲಿ ಜನರಿಗೆ ಹೀಗೆ ಹಣವನ್ನು ಸರ್ಕಾರವೇ ಹೀಗೆ ಉಚಿತವಾಗಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮಿಕ್ಸಿ, ಗ್ರೈಂಡರ್, ಫ್ಯಾನ್, ಟಿವಿ ಸೇರಿದಂತೆ ಅನೇಕ ವಸ್ತುಗಳನ್ನು ಅಲ್ಲಿನ ಸರ್ಕಾರ ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ನೀಡುವ ಮೂಲಕ ಮಗಳ ಭೇಟೆಗೆ ಮುಂದಾಗುವುದು ಇತ್ತೀಚಿನ ವರ್ಷಗಳಲ್ಲಿ ತಮಿಳುನಾಡು ಚುನಾವಣಾ ಸಂಪ್ರದಾಯವಾಗಿಯೇ ಬದಲಾಗಿದೆ.