ಪ್ರತಿಭಟನಾ ನಿರತ ರೈತರಿಂದ ಇಂದಿನಿಂದ ಸರದಿ ಉಪವಾಸ ಸತ್ಯಾಗ್ರಹ

ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಮತ್ತು ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದಿನ ಹಂತಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ನಿರತ ರೈತರು ಇಂದಿನಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಮತ್ತು ಹರ್ಯಾಣ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮುಂದಿನ ಹಂತಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ನಿರತ ರೈತರು ಇಂದಿನಿಂದ ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಹೌದು ದೆಹಲಿಯ ಸಿಂಗು ಗಡಿ ಮತ್ತು ಹರ್ಯಾಣದ ಟಿಕ್ರಿಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಸೋಮವಾರ ಬೆಳಿಗ್ಗೆಯಿಂದ ರೈತರು ಸರದಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಸ್ವರಾಜ್‌ ಇಂಡಿಯಾದ ಮುಖ್ಯಸ್ಥ ಯೋಗೇಂದ್ರ ಯಾದವ್‌ ಅವರು, ‘ಮೊದಲ ಸರದಿಯಲ್ಲಿ 11 ಮಂದಿ ಧರಣಿ ಮಾಡಲಿದ್ದಾರೆ. ಸಿಂಘು ಗಡಿಯಲ್ಲಿ 11 ಮಂದಿ ಮೊದಲ ಸರದಿಯಲ್ಲಿ ಧರಣಿಯನ್ನು ನಡೆಸಲಿದ್ದಾರೆ. ಹೀಗೆ ದಿನಪೂರ್ತಿ  ಧರಣಿ ಮುಂದುವರಿಯಲಿದೆ.  ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಎಲ್ಲರೂ ಈ ಧರಣಿಯಲ್ಲಿ ಭಾಗಿಯಾಗುವಂತೆ ಅವರು ಕೇಳಿಕೊಂಡಿದ್ದಾರೆ. ಅಲ್ಲದೆ ರಾಷ್ಟ್ರದಾದ್ಯಂತದ ಎಲ್ಲಾ ಪ್ರತಿಭಟನಾ ಸ್ಥಳಗಳಲ್ಲಿ ಎಲ್ಲರೂ ಒಂದೇ ರೀತಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಪಂಜಾಬ್‌, ಹರಿಯಾಣ ಸೇರಿದಂತೆ ದೇಶದ ಇತರೆ ರೈತರು ದೆಹಲಿಯ ವಿವಿಧ ಗಡಿಭಾಗಗಳಲ್ಲಿ ಕಳೆದ ನಾಲ್ಕು ವಾರಗಳಿಂದ ಪ್ರತಿಭಟಿಸುತ್ತಿದ್ದಾರೆ. ರೈತರು ಪ್ರತಿಭನಟೆಯಿಂದಾಗಿ ದೆಹಲಿ ಹಲವು  ಮಾರ್ಗಗಳು ಮುಚ್ಚಿವೆ. ಪೊಲೀಸರು ಈ ಬಗ್ಗೆ ಸತತವಾಗಿ ಮಾಹಿತಿಯನ್ನು ಪ್ರಕಟಿಸುತ್ತಿದ್ದಾರೆ.

ಟ್ವಿಟರ್ ನಲ್ಲಿ ಟ್ರಾಫಿಕ್ ಅಪ್ ಡೇಟ್ ನೀಡುತ್ತಿರುವ ಪೊಲೀಸರು, ದೆಹಲಿಯ ಗಡಿ ಪ್ರದೇಶಗಳಾದ ಸಿಂಗು, ಔಚಾಂಡಿ, ಪಿಯೌ ಮಣಿಯಾರಿ, ಮತ್ತು ಮಂಗೇಶ್ ಗಡಿಗಳನ್ನು ಮುಚ್ಚಲಾಗಿದೆ. ಲಾಂಪೂರ್, ಸಫಿಯಾಬಾದ್ ಸಬೋಲಿ ಮತ್ತು ಸಿಂಗು ಸ್ಕೂಲ್ ಟೋಲ್ ಟ್ಯಾಕ್ಸ್ ಗಡಿಗಳ ಮೂಲಕ  ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಂತೆಯೇ ಮುಕರ್ಬಾ ಮತ್ತು ಜಿಟಿಕೆ ರಸ್ತೆಯಿಂದ ಸಂಚಾರವನ್ನು ತಿರುಗಿಸಲಾಗಿದ್ದು, ಜನರು ಔಟರ್ ರಿಂಗ್ ರಸ್ತೆ, ಜಿಟಿಕೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್) 44 ನಲ್ಲಿ ವಾಹನ  ಚಲಾಯಿಸದಂತೆ ಸೂಚನೆ ನೀಡಲಾಗಿದೆ. ಕಪಶೇರಾ, ಬದುಸರಾಯ್, ರಾಜೋಕ್ರಿ, ಎನ್ಎಚ್ -8, ಬಿಜ್ವಾಸನ್-ಬಜ್ಘೇರಾ, ಪಾಲಂ ವಿಹಾರ್ ಮತ್ತು ದುಂಡಾಹೇರಾ ಗಡಿಗಳಲ್ಲಿಯೂ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಟಿಕ್ರಿ, ಧನ್ಸಾ ಗಡಿಗಳನ್ನು ಮುಚ್ಚಲಾಗಿದೆ. ಜತಿಕಾರಾ ಗಡಿ ದ್ವಿಚಕ್ರ ಮತ್ತು  ಪಾದಚಾರಿ ಸಂಚಾರಕ್ಕೆ ಮಾತ್ರ ತೆರೆದಿರುತ್ತದೆ ಎಂದು ಸಂಚಾರ ಪೊಲೀಸರು ಟ್ವೀಟ್ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *