ಹೊಸ ಕೊರೋನಾ ಭಯ; ಡಿ. 1ರಿಂದ ಬ್ರಿಟನ್​ನಿಂದ ರಾಜ್ಯಕ್ಕೆ ಬಂದವರು 2 ಸಾವಿರಕ್ಕೂ ಹೆಚ್ಚು

ಬ್ರಿಟನ್ ದೇಶದಲ್ಲಿ ಸೂಪರ್ ಸ್ಪ್ರೆಡರ್ ಎಂದು ಬಣ್ಣಿಸಲಾಗುತ್ತಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಆರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕಟ್ಟೆಚ್ಚರಿಕೆ ವಹಿಸಲಾಗಿದೆ. ಡಿ. 1ರಿಂದ ಬ್ರಿಟನ್​ನಿಂದ ಕರ್ನಾಟಕಕ್ಕೆ ಬಂದಿರುವ 2,127 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ.

ಬೆಂಗಳೂರು(ಡಿ. 23): ಬ್ರಿಟನ್ ರಾಷ್ಟ್ರದಲ್ಲಿ ರೂಪಾಂತರಗೊಂಡು ಅಪಾಯಕಾರಿಯಾಗಿ ಪರಿಣಿಮಿಸಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಬಗ್ಗೆ ಎಲ್ಲೆಡೆ ಭಯ ಆವರಿಸಿದೆ. ಬ್ರಿಟನ್​ನಿಂದ ಬರುವ ಜನರನ್ನ ಕಟ್ಟೆಚ್ಚರಿಕೆಯಿಂದ ಪರಿಶೀಲಿಸುವ ಕೆಲಸ ಆಗುತ್ತಿದೆ. ಭಾರತದಲ್ಲಿ ಬಹಳಷ್ಟು ಮಂದಿ ಆ ದೇಶದಿಂದ ಇಲ್ಲಿಗೆ ಇತ್ತೀಚೆಗೆ ಕಾಲಿಟ್ಟಿದ್ದು, ಕೆಲವರಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ರಾಜ್ಯದಲ್ಲಿ ಡಿಸೆಂಬರ್ 1ರಿಂದ 21ರವರೆಗೆ ಬ್ರಿಟನ್ ದೇಶದಿಂದ ಬಂದವರ ಸಂಖ್ಯೆ 2,127 ಎಂಬ ವಿಚಾರ ಬೆಳಕಿಗೆ ಬಂದಿದೆ. ರಾಜ್ಯ ಆರೋಗ್ಯ ಇಲಾಖೆ ಆ ಎಲ್ಲರ ಪಟ್ಟಿ ಸಿದ್ಧಪಡಿಸಿ ಪರೀಕ್ಷೆಗೊಳಪಡಿಸುತ್ತಿದೆ. ಅವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್​ಗಳ ಟ್ರೇಸಿಂಗ್ ಕಾರ್ಯವೂ ನಡೆಯುತ್ತಿದೆ.

ಬ್ರಿಟನ್​ನಿಂದ ರಾಜ್ಯಕ್ಕೆ ಬಂದಿದ್ದವರ ಪೈಕಿ ನಿನ್ನೆ ಇಬ್ಬರು ವ್ಯಕ್ತಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. 35 ವರ್ಷದ ಮಹಿಳೆ ಮತ್ತು ಆಕೆಯ 6 ವರ್ಷದ ಮಗಳಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಅದು ಹೊಸ ಸ್ವರೂಪದ ಕೊರೋನಾ ವೈರಸ್ ಆಗಿದೆಯಾ ಅಥವಾ ಇಲ್ಲವಾ ಎಂಬುದು ತಿಳಿದುಬಂದಿಲ್ಲ. ಪುಣೆಯ ಲ್ಯಾಬ್​ಗೆ ಸ್ಯಾಂಪಲ್​ಗಳನ್ನ ಕಳುಹಿಸಿಕೊಡಲಾಗಿದೆ.

ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ, ಇದೂವರೆಗೂ ಬ್ರಿಟನ್ ದೇಶದ ಹೊಸ ಸ್ವರೂಪದ ಕೊರೋನಾ ವೈರಸ್ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ. ಬ್ರಿಟನ್ ದೇಶದಿಂದ ಇತ್ತೀಚೆಗೆ ಬಂದವರ ಪೈಕಿ 20 ಮಂದಿಗೆ ಪಾಸಿಟಿವ್ ಬಂದಿದೆ. ಅವರ ಪೈಕಿ ಯಾರಲ್ಲೂ ಕೂಡ ಹೊಸ ಸ್ವರೂಪದ ಸೂಪರ್ ಸ್ಪ್ರೆಡರ್ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ.

ಅಭಯ: ಬಹಳ ಬೇಗ ಹರಡಬಲ್ಲುದು ಎಂಬ ಕಾರಣಕ್ಕೆ ಸೂಪರ್ ಸ್ಪ್ರೆಡರ್ ಎಂದು ಬಣ್ಣಿಸಲಾಗುತ್ತಿರುವ ಹೊಸ ಸ್ವರೂಪದ ಕೊರೋನಾ ವೈರಸ್ ಬಗ್ಗೆ ಜನರಿಗೆ ಸಹಜವಾಗಿಯೇ ಆತಂಕ ಇದೆ. ಆದರೆ, ಆರೋಗ್ಯ ಅಧಿಕಾರಿಗಳು ಈ ಆತಂಕ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಸದ್ಯ ಲಭ್ಯ ಇರುವ ಮಾಹಿತಿ ಹಾಗೂ ನಮ್ಮ ಅಂದಾಜಿನ ಪ್ರಕಾರ ಹೊಸ ಸ್ವರೂಪದ ಕೊರೋನಾ ಬಗ್ಗೆ ಆತಂಕ ಪಡಬೇಕಿಲ್ಲ. ನಾವು ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇದು ಹೊಸ ಸವಾಲಾಗಿದ್ದು, ನಮ್ಮ ಸಮಗ್ರ ಪ್ರಯತ್ನಗಳಿಂದ ಎದುರಿಸಬೇಕು. ತಳಿ ಸರಪಳಿ (Genomic Sequence)ಯನ್ನು ನಾವು ಕತ್ತರಿಸಿದರೆ ಸುರಕ್ಷಿತವಾಗಿರುತ್ತೇವೆ ಎಂದು ನೀತಿ ಆಯೋಗ್​ನ ಆರೋಗ್ಯ ವಿಭಾಗದ ಸದಸ್ಯ ಡಾ. ವಿ ಕೆ ಪೌಲ್ ಸ್ಪಷ್ಟಪಡಿಸಿದ್ದಾರೆ.

ಹೊಸ ಸ್ವರೂಪದ ವೈರಸ್​ನಿಂದ ನಮ್ಮ ದೇಹಕ್ಕೆ ರೋಗ ಆವರಿಸುವ ಸಾಧ್ಯತೆ ಶೇ. 70ರಷ್ಟು ಹೆಚ್ಚಾಗುತ್ತದೆ. ಆ ಕಾರಣಕ್ಕೆ ಅದನ್ನ ಸೂಪರ್ ಸ್ಪ್ರೆಡರ್ ಎನ್ನುತ್ತಾರೆ. ಇದು ಸೋಂಕಿನ ಸಾಧ್ಯತೆಯನ್ನ ಹೆಚ್ಚಿಸುತ್ತದೆಯೇ ಹೊರತು ರೋಗದ ತೀವ್ರತೆ ಹೆಚ್ಚಿಸುವುದಿಲ್ಲ. ಹೆಚ್ಚು ಮಂದಿಗೆ ಇದು ಹರಡುತ್ತದೆ ಎಂಬುದೇ ಹ ಎಚ್ಚು ಆತಂಕದ ಸಂಗತಿ. ಆದರೆ, ಈಗ ಅಭಿವೃದ್ಧಿಯಾಗುತ್ತಿರುವ ಲಸಿಕೆಗಳು ನಿರುಪಯುಕ್ತ ಆಗುತ್ತವೆ ಎಂಬ ಭಯ ಬೇಡ ಎಂದು ಡಾ. ಪೌಲ್ ಹೇಳಿದ್ದಾರೆ.ಬೆಂಗಳೂರಿನ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಅವರೂ ಕೂಡ ಹೊಸ ಸ್ವರೂಪದ ಕೊರೋನಾ ಬಗ್ಗೆ ಹೆಚ್ಚು ಆತಂಕ ಪಡಬೇಕಿಲ್ಲ ಎಂದಿದ್ದಾರೆ. ವೈರಾಣುಗಳಲ್ಲಿ ಮ್ಯುಟೇಶನ್ (Mutation) ಎಂಬುದು ಬಹಳ ಸಹಜ ಪ್ರಕ್ರಿಯೆ. ರೂಪಾಂತರಗೊಂಡು ವೇಗವಾಗಿ ಹರಡುವ ಶಕ್ತಿ ಹೊಂದಿರುತ್ತದೆ. ಆದರೆ ಸೋಂಕಿನ ತೀವ್ರತೆ ಹೆಚ್ಚಿರುವುದಿಲ್ಲ. ಚಿಕಿತ್ಸಾ ವಿಧಾನ ಮತ್ತು ಕ್ವಾರಂಟೈನ್ ನಿಯಮಗಳು ಈಗಿರುವಂತೆಯೇ ಇರಲಿವೆ ಎಂದು ಕೋವಿಡ್ ತಾಂತ್ರಿ ಸಲಹಾ ಸಮಿತಿ ಮುಖ್ಯಸ್ಥರೂ ಆಗಿರುವ ಡಾ. ಮಂಜುನಾಥ್ ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *