Bangalore weather: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಿಂದೆಂದಿಗಿಂತಲೂ ಚಳಿ; ಸಂಕ್ರಾಂತಿ ವೇಳೆಗೆ ಚಳಿ ಥರಗುಟ್ಟಿಸುವ ಆತಂಕ
ಬೆಂಗಳೂರು ಸೇರಿದಂತೆ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ 10 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಬೆಂಗಳೂರು(ಡಿಸೆಂಬರ್ 23): ಸಿಲಿಕಾನ್ ಸಿಟಿಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಚಳಿಯಿದೆ. ಕಳೆದ ಹದಿನೈದು ದಿನಗಳ ಹಿಂದೆ ಚಂಡಮಾರುತ ಕಾರಣದಿಂದ ಚಳಿ ಹೆಚ್ಚಿತ್ತು. ಇದೀಗ ಚಂಡಮಾರುತದಿಂದಲ್ಲದೇ ಹೋದರೂ ಚಳಿಗಾಲಕ್ಕೆ ಚಳಿಯಿದೆ ಎಂದುಕೊಳ್ಳುವವರಿದ್ದಾರೆ. ಆದರೆ, ಕಳೆದ ವರುಷಕ್ಕೆ ಹೋಲಿಸಿದರಲ್ಲಿ ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಚಳಿಯಿದೆ. ಜಾಕೆಟ್, ಸ್ವೆಟರ್ ಹಾಕಿದರೂ ಚಳಿ ಕಡಿಮೆಯಾಗುತ್ತಿಲ್ಲ. ಕಳೆದೊಂದು ವಾರದಿಂದ ಅತಿಯಾದ ಚಳಿಯಿದ್ದು, ಬೆಳಗ್ಗೆ ಹಾಗೂ ರಾತ್ರಿ ವೇಳೆ ಇನ್ನಷ್ಟು ಹೆಚ್ಚಿದೆ. ನಿಮ್ಮೆ ಮಂಗಳವಾರ ಬೆಂಗಳೂರಿನ ಹೆಚ್ಎಎಲ್ ಬಳಿ ಕನಿಷ್ಠ 12 ತಾಪಮಾನ ದಾಖಲಾಗಿದೆ. ಮೊನ್ನೆ ಇದೇ ಸ್ಥಳದಲ್ಲಿ ತಾಪಮಾನ 13 ಇತ್ತು. ಉಳಿದಂತೆ ಬೆಂಗಳೂರು ನಗರದ ಇತರಡೆ 14 ರಿಂದ 18 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗಿದೆ. ಇದು ಜನವರಿ ಮೊದಲ ವಾರದಲ್ಲಿ ಇನ್ನಷ್ಟು ಕಡಿಮೆಯಾಗಲಿದ್ದು, ಕನಿಷ್ಟ 10 ಡಿಗ್ರಿ ತಾಪಮಾನ ದಾಖಲಾಗಬಹುದು ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸುತ್ತಾರೆ.
ಕಳೆದ ವರುಷ ಹೇಳಿಕೊಳ್ಳುವಷ್ಟು ಚಳಿಯಿದ್ದಿಲ್ಲ. ಆದರೆ ಈ ಬಾರಿ ಲ್ಯಾಬಿನೋ ಕಂಡೀಷನ್ ನಿಂದಾಗಿ ಅತಿ ಹೆಚ್ಚಿನ ಚಳಿಯಾಗುತ್ತಿದೆ. ಫೆಸಿಫಿಕ್ ಮಹಾಸಾಗರ ಮೇಲ್ಮೈ ನೀರು ತಂಪಾಗುವಿಕೆ ಪ್ರಮುಖ ಕಾರಣವಾಗಿದೆ. ಉತ್ತರ ಹಾಗೂ ಈಶಾನ್ಯದಿಂದ ಬರುವ ಒಣಹವೆಯಿಂದಾಗಿ ಚಳಿ ಹೆಚ್ಚಾಗುತ್ತಿದೆ. ಡಿಸೆಂಬರ್ 21ರಿಂದ ಹಗಲಿನ ವೇಳೆ ಕಡಿಮೆಯಾಗಿ ರಾತ್ರಿ ವೇಳೆ ಹೆಚ್ಚಾಗುತ್ತಿದೆ. ಇದರಿಂದ ಕೂಲಿಂಗ್ ಹೆಚ್ಚಾಗಿ ಹೀಟ್ ಕಡಿಮೆಯಾಗುತ್ತದೆ. ಇದರಿಂದಾಗಿ ತಾಪಮಾನ ಕನಿಷ್ಠಕ್ಕಿಳಿಯುತ್ತಿದೆ.
ಈ ಬಾರಿ ಬೆಳಗ್ಗೆ ಮಂಜು ಹೆಚ್ಚಿರಲಿದ್ದು, ವಾಹನಗಳ ಸಂಚಾರಕ್ಕೆ ಕಷ್ಟವಾಗಲಿದೆ. ಅಪಘಾತ ಹೆಚ್ಚಾಗುವ ಸಾಧ್ಯತೆಯಿದ್ದು, ಸಂಕ್ರಮಣದವರೆಗೆ ಚಳಿ ಜೊತೆ ಬೆಳಗ್ಗೆ ಮಂಜು ಇರಲಿದೆ. 1884ರಲ್ಲಿ ಅತೀ ಕಡಿಮೆ ಅಂದ್ರೆ 7.8 °C ತಾಪಮಾನ ದಾಖಲಾಗಿತ್ತು. ಕಳೆದ ವರುಷ ಇಷ್ಟು ಚಳಿಯಿದ್ದಿಲ್ಲ. ಆದರೆ ಈ ವರುಷ ಹೆಚ್ಚು ಚಳಿ ಜಾಸ್ತಿಯಿದೆ. ಬೆಳಗ್ಗೆ ಮನೆಯಿಂದ ಹೊರಬರಲು ಆಗುವುದಿಲ್ಲ. ಮಂಜು ಹೆಚ್ಚಿದೆ.
ವಾಹನದಲ್ಲಿ ಹೋಗುತ್ತಿದ್ದರೆ ಮುಂದೆ ಯಾವ ವಾಹನ ಬರುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ನಾನು ಬೆಂಗಳೂರು ನಿವಾಸಿಯಾದರೂ ಇಂತಹ ಚಳಿ ನೋಡಿಲ್ಲ ಎನ್ನುತ್ತಾರೆ ಬೆಂಗಳೂರು ನಿವಾಸಿ ಸುಧಾ ಗೌಡ.
ಬೆಂಗಳೂರು ಸೇರಿದಂತೆ ಬೀದರ್, ಕಲಬುರ್ಗಿ, ರಾಯಚೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ 10 ಡಿಗ್ರಿ ಕನಿಷ್ಟ ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಬೆಳಗ್ಗೆ ಮಂಜು ಹೆಚ್ಚಿರುವುದರಿಂದ ವಾಹನ ಚಾಲನೆ ಮಾಡುವಾಗ ಎಚ್ಚರ ವಹಿಸಬೇಕಾಗಿದೆ. ಸಂಕ್ರಾಂತಿ ಮುಗಿಯುವವರೆಗೂ ಹೆಚ್ಚಿನ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.