ಕೋವಿಡ್ ರೂಪಾಂತರ: ಕೂಡಲೇ ಕಾರ್ಯಪ್ರವೃತರಾಗಿ, ರಾಜ್ಯ ಸರ್ಕಾರಕ್ಕೆ ಎಚ್ಕೆ ಪಾಟೀಲ್ ಆಗ್ರಹ
ಕೋವಿಡ್ 19 ಸೋಂಕು ರೂಪಾಂತರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಎಚ್ಕೆ ಪಾಟೀಲ್ ಆಗ್ರಹಿಸಿದ್ದಾರೆ. ಈ ಕುರಿತಾಗಿ ಅವರು ಸಿಎಂ ಬಿಎಸ್ವೈ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ಗೆ ಪತ್ರವನ್ನು ಬರೆದಿದ್ದಾರೆ.
ಬೆಂಗಳೂರು: ಕೋವಿಡ್ ರೂಪಾಂತರ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕೂಡಲೇ ಕಾರ್ಯಪ್ರವೃತರಾಗಿ ಎಂದು ಮಾಜಿ ಸಚಿವ ಎಚ್ಕೆ ಪಾಟೀಲ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಈ ಕುರಿತಾಗಿ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರಿಗೆ ಪತ್ರವನ್ನು ಬರೆದಿದ್ದಾರೆ.
ಮಾರ್ಚ್ 23,2020 ರಂದು ವಿಧಾನಸಭೆಯಲ್ಲಿ ನಾನು ವಿದೇಶದಿಂದ ಬರುವ ಪ್ರಯಾಣಿಕರ ಬಗ್ಗೆ ವಿಷಯ ಪ್ರಸ್ತಾಪಿಸಿ ಈಗಾಗಲೇ ಬಂದಿರುವ 22 ಸಾವಿರ ಜನರನ್ನು ಪ್ರತ್ಯೇಕಿಸಬೇಕೆಂದು ಒತ್ತಾಯಿಸಿದ್ದೆ. ಆದರೆ ನನ್ನ ಕಾಳಜಿ ಪೂರ್ವಕವಾದ ಒತ್ತಾಯವನ್ನು ನಿರ್ಲಕ್ಷ ಮಡಲಾಯಿತು ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಈಗ ಬ್ರಿಟನ್ ದೇಶದಲ್ಲಿ ಕೊರೊನಾ ವೈರಸ್ 2 ನೇ ಪ್ರಭೇದವು ಕಾಣಿಸಿಕೊಂಡಿದೆ. ಈ ರೋಗ ಹರಡುವಿಕೆ ತೀವ್ರ ಹಾಗೂ ವ್ಯಾಪಕವಾಗಿದೆ ತಿಳಿದರೂ ಕೇಂದ್ರ ಸರ್ಕಾರವಾಗಲಿ ರಾಜ್ಯ ಸರ್ಕಾರವಾಗಲಿ ಬ್ರಿಟನ್ ನೆದರ್ಲ್ಯಾಂಡ್ ಮತ್ತು ಇತರ ದೇಶಗಳಿಂದ ಈಗಾಗಲೇ ಭಾರತಕ್ಕೆ ಬಂದಿಳಿದಿರುವ ಪ್ರಯಾಣಿಕರ ಚಲನವಲನಗಳನ್ನು ನಿಯಂತ್ರಿಸುವ ಅಥವಾ ನಿಗಾವಹಿಸುವ ಯಾವುದೇ ಪರಿಣಾಮಕಾರಿಯಾದ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ನನಗೆ ಬಂದಿರುವ ಮಾಹಿತಿಯಂತೆ 12,300 ಜನ ಪ್ರಯಾಣಿಕರು ಕೊರೊನಾ ಪ್ರಭೇದ ಕಾಣಿಸಿಕೊಂಡಿರುವ ರಾಷ್ಟ್ರಗಳಿಂದ ಬೆಂಗಳೂರಿಗೆ ಮತ್ತು ಕರ್ನಾಟಕಕ್ಕೆ ಬಂದಿಳಿದಿದ್ದಾರೆ. ವಿಮಾನ ನಿಲ್ದಾಣಗಳಲ್ಲಿ ಈ ಪ್ರಯಾಣಿಕರನ್ನು ಕನಿಷ್ಠ ಸ್ಲ್ರೀನಿಂಗ್ ಸಹ ಮಾಡಲಾಗಿಲ್ಲ.
ಇವರನ್ನೆಲ್ಲಾ ಹೊರಗೆ ಬಂದ ಮೇಲೆ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದೆ. ಅವರಲ್ಲಿ ಪಾಸಿಟಿವ್ ಫಲಿತಾಂಶ ಕಂಡು ಬಂದರೆ ಹರಡುವಿಕೆ ನಿಯಂತ್ರಣ ಮಾಡುವಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈಗ ಆರ್ಟಿಪಿಸಿಆರ್ ಪರೀಕ್ಷೆಗೆ ಮುಂದಾಗಿರುವುದು ರಾಜ್ಯ ಸರ್ಕಾರದ ನಿಷ್ಕ್ರೀಯತೆಯನ್ನು ಸೂಚಿಸುತ್ತದೆ. ಈ ಕೂಡಲೇ ಕಾರ್ಯಪ್ರವೃತರಾಗಿ ಕೊರೊನಾದ 2 ನೇ ಪ್ರಭೇದ ಕಂಡು ಬಂದಿರುವ ದೇಶಗಳಿಂದ ಬಂದಿರುವ ಪ್ರಯಾಣಿಕರನ್ನು ಕೂಡಲೇ ಪ್ರತ್ಯೇಕಿಸಲು ಕ್ರಮ ಕೈಗೊಳ್ಳಬೇಕೆಂದು ಎಂದು ಅವರು ಪತ್ರದ ಮೂಲಕ ಒತ್ತಾಯಿಸಿದ್ದಾರೆ.