‘ಬೆಲ್ ಬಾಟಂ’ ನಿರ್ದೇಶಕ ಜಯತೀರ್ಥ ಸಿನಿಮಾದಲ್ಲಿ ‘ಕನ್ನಡತಿ’ ರಂಜನಿ ರಾಘವನ್ & ರಿಷಿ!
ಜಯತೀರ್ಥ, ಪವನ್ ಕುಮಾರ್, ಯೋಗರಾಜ್ ಭಟ್, ಕೆ.ಎಂ. ಚೈತನ್ಯ ಮತ್ತು ಶಶಾಂಕ್ ಸೇರಿ ನಿರ್ದೇಶಿಸುತ್ತಿರುವ ಪ್ರಯೋಗಾತ್ಮಕ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಅದರಲ್ಲಿ ರಿಷಿ ಮತ್ತು ರಂಜನಿ ರಾಘವನ್ ಅಭಿನಯಿಸುತ್ತಿದ್ದಾರೆ
ಕನ್ನಡ ಚಿತ್ರರಂಗದಲ್ಲಿ ಐದು ನಿರ್ದೇಶಕರು ಸೇರಿ ಮಾಡುತ್ತಿರುವ ಒಂದು ಹೊಸ ಪ್ರಯೋಗಾತ್ಮಕ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆ ಸೃಷ್ಟಿ ಆಗಿದೆ. ಐವರು ನಿರ್ದೇಶಕರ ಪೈಕಿ ‘ಬೆಲ್ ಬಾಟಂ‘ ಖ್ಯಾತಿಯ ಜಯತೀರ್ಥ ನಿರ್ದೇಶನ ಮಾಡಲಿರುವ ಕಥೆಗೆ ಕಲಾವಿದರ ಆಯ್ಕೆ ಆಗಿದ್ದು, ರಿಷಿ ಮತ್ತು ರಂಜನಿ ರಾಘವನ್ ನಟಿಸುತ್ತಿದ್ದಾರೆ.
ಈ ಮೊದಲು ‘ಪುಟ್ಟ ಗೌರಿ ಮದುವೆ’ ಸೀರಿಯಲ್ ಮೂಲಕ ಅಪಾರ ಖ್ಯಾತಿ ಗಳಿಸಿದ್ದ ರಂಜನಿ ರಾಘವನ್ ಈಗ ‘ಕನ್ನಡತಿ‘ ಧಾರಾವಾಹಿ ಮೂಲಕ ಮಿಂಚುತ್ತಿದ್ದಾರೆ. ಅದರ ಜೊತೆಗೆ ಅವರಿಗೆ ಸಿನಿಮಾಗಳಿಂದಲೂ ಒಳ್ಳೊಳ್ಳೆಯ ಆಫರ್‌ಗಳು ಹರಿದುಬರುತ್ತಿದೆ. ಈಗ ಖ್ಯಾತ ನಿರ್ದೇಶಕ ಜಯತೀರ್ಥ ಜೊತೆ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ. ಈ ಚಿತ್ರಕ್ಕೆ ಈಗಾಗಲೇ ಶೂಟಿಂಗ್ ಆರಂಭವಾಗಿದೆ.
ಆಪರೇಷನ್ ಅಲಮೇಲಮ್ಮ’, ‘ಕವಲುದಾರಿ’ ಮುಂತಾದ ಸಿನಿಮಾಗಳ ಮೂಲಕ ಜನಮನ ಗೆದ್ದಿರುವ ನಟ ರಿಷಿ ಅವರು ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ಅದೀಗ ಖಚಿತ ಆಗಿದೆ. ವಿಶೇಷವೆಂದರೆ ಅವರು ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಪೊಲೀಸ್ ಅಧಿಕಾರಿ ಗೆಟಪ್‌ನಲ್ಲಿ ಅವರು ನಟಿಸುತ್ತಿರುವ ಕೆಲವು ಫೋಟೋಗಳನ್ನು ನಿರ್ದೇಶಕ ಜಯತೀರ್ಥ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪವನ್ ಕುಮಾರ್, ಶಶಾಂಕ್, ಯೋಗರಾಜ್ ಭಟ್, ಕೆ.ಎಂ. ಚೈತನ್ಯ ಅವರು ಜೊತೆಯಾಗಿ ಈ ಪ್ರಾಜೆಕ್ಟ್ ಮಾಡುತ್ತಿದ್ದಾರೆ. ಈ ಐದು ಜನ ಪ್ರತಿಭಾವಂತ ನಿರ್ದೇಶಕರ ಸಂಗಮದಲ್ಲಿ ಈ ಸಿನಿಮಾ ಮೂಡಿಬರಲಿದೆ. ‘ಬೆಲ್ ಬಾಟಂ’ ಮೂಲಕ ಭಾರಿ ಯಶಸ್ಸು ಪಡೆದ ಜಯತೀರ್ಥ ಅವರ ಮುಂದಿನ ಸಿನಿಮಾಗಳ ಬಗ್ಗೆ ಸಿನಿಪ್ರಿಯರಿಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ ‘ಬನಾರಸ್’ ಕೂಡ ಬಿಡುಗಡೆಗೆ ಸಜ್ಜಾಗುತ್ತಿದೆ.