ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ; ಪ್ರಮುಖ ಆರೋಪಿ ಸೇರಿ ಆರು ಮಂದಿ ಬಂಧನ
ಕಿಡ್ನಾಪ್ ಕೇಸ್ ನಲ್ಲಿ ಒಟ್ಟು 7 ಜನರು ಭಾಗಿಯಾಗಿ ಓರ್ವ ನಾಪತ್ತೆ ಆಗಿದ್ದಾನೆ. ಕೇಸ್ ತಡವಾಗಲು ನರಸಾಪುರದಲ್ಲಿ ವಿಸ್ಟ್ರಾನ್ ಕಂಪನಿ ಗಲಾಟೆ ಕೇಸ್ ಕಾರಣವಾಯಿತು ಎಂದು ಐಜಿಪಿ ಮಾಹಿತಿ ನೀಡಿದ್ದಾರೆ.
ಕೋಲಾರ(ಡಿ.24): ಕಳೆದ ನವೆಂಬರ್ ತಿಂಗಳ 25 ನೇ ತಾರೀಖು ಮಾಜಿ ಸಚಿವ ವರ್ತೂರು ಪ್ರಕಾಶ್ ಹಾಗೂ ಚಾಲಕನನ್ನು ಕಿಡ್ನಾಪರ್ಸ್‍ಗಳು ಕೋಲಾರ ತಾಲೂಕಿನ ಬೆಗ್ಲಿಹೊಸಹಳ್ಳಿ ಬಳಿ ಅಪಹರಿಸಿದ್ದರು. ಮೂರು ದಿನಗಳ ಕಾಲ ಕಾರಲ್ಲೇ ಇರಿಸಿಕೊಂಡು ತಿರುಗಾಟ ನಡೆಸಿ ವರ್ತೂರು ಪ್ರಕಾಶ್ ಅವರ ಬಳಿ 48 ಲಕ್ಷ ಹಣವನ್ನು ಪಡೆದುಕೊಂಡು, ಇನ್ನೂ ಹೆಚ್ಚಿನ ಹಣಕ್ಕಾಗಿ ಕಿಡ್ನಾಪರ್ಸ್‍ಗಳು ವರ್ತೂರು ಪ್ರಕಾಶ್ ಅವರನ್ನು ತಮ್ಮಲ್ಲಿ ಇಟ್ಟುಕೊಂಡಿದ್ದರು. ಆದರೆ ಚಾಲಕ ಸುನೀಲ್ ಅಪಹರಣಕಾರರಿಂದ ತಪ್ಪಿಸಿಕೊಂಡ ಹಿನ್ನೆಲೆ, ಪೊಲೀಸರಿಗೆ ಚಾಲಕ ಮಾಹಿತಿ ನೀಡುವ ಭಯ ಅಪಹರಣಕಾರರಿಗೆ ಶುರುವಾಗಿತ್ತು. ಹೀಗಾಗಿ ನವೆಂಬರ್ 28 ರಂದು ಬೆಳಗಿನ ಜಾವ 4 ಗಂಟೆಗೆ ಹೊಸಕೋಟೆ ತಾಲೂಕಿನ ನಂದಗುಡಿಯ ಶಿವನಾಪುರ ಬಳಿ ವರ್ತೂರು ಪ್ರಕಾಶ್ ಅವರನ್ನು ಬಿಟ್ಟು ಹೋಗಿದ್ದರು. ಬಳಿಕ ಬೆಳ್ಳೂಂದರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ತೂರು ಪ್ರಕಾಶ್ ಕಾರು ಪತ್ತೆಯಾಗುತ್ತಿದ್ದಂತೆ ಕಿಡ್ನಾಪ್ ಪ್ರಕರಣ ಹೊರಗಡೆ ಬಂದಿದೆ. ಬೆಳ್ಳಂದೂರು ಪೊಲೀಸ್ ಠಾಣೆಯಿಂದ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಕೇಸ್ ಶಿಫ್ಟ್ ಆಗುತ್ತಿದ್ದಂತೆ, ಡಿವೈಎಸ್ಪಿ ಸಾಯಿಲ್ ಬಾಗ್ಲಾ ನೇತೃತ್ವದಲ್ಲಿ ಪ್ರಕರಣದ ಆರೋಪಿಗಳನ್ನ ಪತ್ತೆ ಹಚ್ಚವ ಕಾರ್ಯಾಚರಣೆ ಶುರು ಮಾಡಿದ್ದರು.
ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಅಪಹರಣದ ಬಗ್ಗೆ ಆರೋಪಿಗಳಿಂದ ಸಣ್ಣ ಸುಳಿವು ಸಿಗಲಿಲ್ಲ, ಅಪಹರಣ ಸಂಧರ್ಭದಲ್ಲಿ ಅಪಹರಣಕಾರರು ಉಪಯೋಗಿಸಿದ ಫೋನ್ ಹಾಗೂ ಹಣಕ್ಕಾಗಿ ವರ್ತೂರು ಪ್ರಕಾಶ್ ಬೇರೆಯವರಿಗೆ ಮಾಡಿದ ಫೋನ್ ಕಾಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಹಚ್ಚಲು ಸುಲಭವಾಯಿತು. ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಓಡಾಟ ನಡೆಸಿದ ಪೊಲೀಸರು ತಮಿಳುನಾಡಿನ ಮಧುರೈನಲ್ಲಿ ಪ್ರಕರಣದ ಕಿಂಗ್ ಪಿನ್ ಎ ಒನ್ ಆರೋಪಿ ಕವಿರಾಜ್ ನನ್ನು ಬಂಧಿಸಿದ್ದರು.
ನ್ನು, ಕವಿರಾಜ್ ಈ ಕೇಸ್‍ನ ಮುಖ್ಯ ಆರೋಪಿ ಆತನ ವಿರುದ್ಧ 10 ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ತಮಿಳುನಾಡು ಹಾಗೂ ಬೆಂಗಳೂರಿನಲ್ಲಿ ಕೇಸ್ಗಳಿವೆ. ಕಿಡ್ನಾಪ್ ನಡೆದು ಮೂರು ದಿನಗಳಲ್ಲಿ 48 ಲಕ್ಷ ಹಣವನ್ನು ಇವರು ತೆಗೆದುಕೊಂಡಿದ್ದರು. ಈಗ 20 ಲಕ್ಷ 50 ಸಾವಿರ ಕಿಡ್ನಾಪರ್ಸ್ ಗಳಿಂದ ರಿಕವರಿ ಮಾಡಿದ್ದೇವೆ. ಇನ್ನುಳಿದ ಹಣ ಆರೋಪಿಗಳಿಂದಲೇ ರಿಕವರಿ ಮಾಡುತ್ತೇವೆ ಎಂದು ಐಜಿ ಸೀಮಂತ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳಲ್ಲಿ ಪ್ರಮುಖವಾಗಿ ಕವಿರಾಜ್ ತಮಿಳುನಾಡಿನ ಹೊಸೂರು ನಿವಾಸಿಯಾಗಿದ್ದು, ಉಳಿದ ಐವರಾದ ಲಿಖಿತ್, ಉಲ್ಲಾಸ್ , ಮನೋಜ್, ರಾಘವೇಂದ್ರ, ಪ್ರವೀಣ್ ಬಂಧಿತರಾಗಿದ್ದಾರೆ. ಕಿಡ್ನಾಪ್ ಕೇಸ್ ನಲ್ಲಿ ಒಟ್ಟು 7 ಜನರು ಭಾಗಿಯಾಗಿ ಓರ್ವ ನಾಪತ್ತೆ ಆಗಿದ್ದಾನೆ. ಕೇಸ್ ತಡವಾಗಲು ನರಸಾಪುರದಲ್ಲಿ ವಿಸ್ಟ್ರಾನ್ ಕಂಪನಿ ಗಲಾಟೆ ಕೇಸ್ ಕಾರಣವಾಯಿತು ಎಂದು ಐಜಿಪಿ ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಇನೋವಾ ಕಾರು , ಎರಡು ಮಾರುತಿ ಶಿಫ್ಟ್, ಒಂದು ಮಾರುತಿ ರಿಟ್ಜ್, ಒಂದು ಕೆಟಿಎಂ ಡ್ಯುಕ್, ಡ್ರಾಗರ್, ಕಬ್ಬಿಣದ ಲಾಂಗ್, ಬೇಸ್ ಬಾಲ್ ಬ್ಯಾಟ್, ಮಚ್ಚು, ಕಾರಿನ ನಂಬರ್ ಪ್ಲೇಟ್, ಮಂಕಿ ಟೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ, ಇನ್ನು ಪತ್ತೆಯಾಗಿರುವ ಎಲ್ಲಾ ವಾಹನಗಳು ಆರೋಪಿಗಳದ್ದೆ ಎಂದು ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಪ್ರಕರಣ ಮುಖ್ಯ ಆರೋಪಿ ಕವಿರಾಜ್ ಗೆ ವರ್ತೂರು ಪ್ರಕಾಶ್ ಬಳಿ ಕೋಟಿ ಕೋಟಿ ದುಡ್ಡು ಸಿಗುತ್ತ ಎಂಬ ಮಾಹಿತಿಯಿಂದಲೇ ಕಿಡ್ನಾಪ್ ಮಾಡಿದ್ದಾಗಿ ತಿಳಿಸಿದ್ದು, ಇದಕ್ಕೆ ಯಾರಾದರು ಕುಮ್ಮಕ್ಕು ನೀಡಿದ್ದಾರಾ ಅಥವಾ ಬೇರೆ ಏನಾದರು ಕಾರಣ ಇದೆಯಾ ಎನ್ನುವುದರ ಬಗ್ಗೆ ಪೊಲೀಸರು ಮಾಹಿತಿಯಿಲ್ಲ ಎಂಬ ಉತ್ತರ ನೀಡಿದ್ದಾರೆ, ಆರೋಪಿ ಕವಿರಾಜ್‍ನನ್ನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು ಮತ್ತಷ್ಟು ತನಿಖೆ ನಡೆಸುವುದರಲ್ಲಿ ಎರಡು ಮಾತಿಲ್ಲ.
ಒಟ್ಟಾರೆ ತನಿಖೆಯಲ್ಲಿ ಇಬ್ಬರು ಎಎಸ್ಪಿ, ಮೂವರು ಸಿಪಿಐ, ಮೂವರು ಪಿಎಸೈ, ಇಬ್ಬರು ಎಎಸೈ, ಸೇರಿದಂತೆ ಇತರೆ ಸಿಬ್ಬಂದಿಗಳು ಶ್ರಮವಹಿಸಿ ಕೇಸ್ ಆರೋಪಿಗಳನ್ನ ಪತ್ತೆ ಹಚ್ಚಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಕರಣವನ್ನು ಶ್ರೀಘದಲ್ಲಿ ಪತ್ತೆ ಹಚ್ಚಲು ಕಾರಣವಾದ ತನಿಖೆಯ ಸಿಬ್ಬಂದಿಗಳಿಗೆ ಐಜಿಪಿ ಸೀಮಂತ್‍ಕುಮಾರ್ ಸಿಂಗ್ 50 ಸಾವಿರ ನಗದು ಹಾಗೂ ಎಲ್ಲಾರಿಗೂ ಪ್ರಶಂಸಾ ಪತ್ರ ನೀಡಿ ಆಭಿನಂದಿಸಿದರು.
ಒಟ್ಟಿನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್‍ನ ಆರೋಪಿಗಳು ಅಂದರ್ ಆಗಿದ್ದು, ಹಗಲು ರಾತ್ರಿ ನಿದ್ದೆಗೆಟ್ಟು ಆರೋಪಿಗಳನ್ನ ಬಂಧಿಸುವಲ್ಲಿ ಕೋಲಾರ ಪೊಲೀಸರು ಯಶಸ್ವಿಯಾಗಿದ್ದಾರೆ.