ಜೀನ್ಸ್ ಪ್ಯಾಂಟ್ ಹಾಕಲ್ಲ, ಡ್ಯಾನ್ಸ್ ಮಾಡಲ್ಲ ಎಂದ ಹೆಂಡತಿಗೆ ತಲಾಖ್ ನೀಡಿದ ಗಂಡ!
Shocking News: ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಹಾಶಯನೊಬ್ಬ ತನ್ನ ಹೆಂಡತಿಗೆ ಡ್ಯಾನ್ಸ್ ಬರುವುದಿಲ್ಲ, ಜೀನ್ಸ್ ಮುಂತಾದ ಮಾಡರ್ನ್ ಡ್ರೆಸ್ ಧರಿಸುವುದಿಲ್ಲ ಎಂಬ ಕಾರಣಕ್ಕೆ ಡೈವೋರ್ಸ್ ನೀಡಿದ್ದಾನೆ.

ಮೀರತ್ (ಡಿ. 24): ‘ಗಂಡ-ಹೆಂಡತಿ ಜಗಳ ಉಂಡು ಮಲಗೋತನಕ’ ಎಂಬ ಮಾತಿದೆ. ಆದರೆ, ಈ ಕಾಲದಲ್ಲಿ ಅದು ಸುಳ್ಳಾದ ಸಂದರ್ಭಗಳೇ ಹೆಚ್ಚು. ಗಂಡ ಕಿರುಕುಳ ಕೊಡುತ್ತಾನೆಂದೋ, ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆಂದೋ, ಅಥವಾ ಹೆಂಡತಿಯೇ ಬೇರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆಂದೋ ಹೀಗೆ ನಾನಾ ಕಾರಣಕ್ಕೆ ವಿಚ್ಛೇದನಗಳು ನಡೆಯುತ್ತಲೇ ಇರುತ್ತವೆ. ಗೊರಕೆ ಹೊಡೆಯುತ್ತಾರೆಂಬ ಸಣ್ಣ ಕಾರಣಕ್ಕೆ ಡೈವೋರ್ಸ್ ನೀಡಿದ ಪ್ರಕರಣಗಳೂ ಇವೆ. ಆದರೆ, ಉತ್ತರ ಪ್ರದೇಶದಲ್ಲೊಬ್ಬ ವ್ಯಕ್ತಿ ತನ್ನ ಹೆಂಡತಿ ಜೀನ್ಸ್ ಧರಿಸುವುದಿಲ್ಲ, ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ನೀಡಿದ್ದಾನೆ!
ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಮಹಾಶಯನೊಬ್ಬ ತನ್ನ ಹೆಂಡತಿಗೆ ಡ್ಯಾನ್ಸ್ ಬರುವುದಿಲ್ಲ, ಜೀನ್ಸ್ ಮುಂತಾದ ಮಾಡರ್ನ್ ಡ್ರೆಸ್ ಧರಿಸುವುದಿಲ್ಲ ಎಂಬ ಕಾರಣಕ್ಕೆ ತಲಾಖ್ ನೀಡಿದ್ದಾನೆ. ಇಷ್ಟೇ ಅಲ್ಲ, ಹೆಂಡತಿಗೆ ಮೂರು ಬಾರಿ ತಲಾಖ್ ಹೇಳಿದವನೇ ಕೋಪದಲ್ಲಿ ಮನೆಗೆ ಹೋಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದಾನೆ! ಆತನ ಕುಟುಂಬಸ್ಥರು ಮತ್ತು ಸ್ಥಳೀಯರು ಆತನನ್ನು ಬೆಂಕಿಯಿಂದ ಕಾಪಾಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮಂಗಳವಾರ ಈ ವಿಚಿತ್ರ ಘಟನೆ ನಡೆದಿದೆ.

ಅನಾಸ್ ಎಂಬಾತನೇ ಹೆಂಡತಿಗೆ ಈ ರೀತಿ ವಿಚಿತ್ರ ಕಾರಣಕ್ಕೆ ತಲಾಖ್ ನೀಡಿದಾತ. 8 ವರ್ಷಗಳ ಹಿಂದೆ ಅಮೀರುದ್ದೀನ್ ಎಂಬುವವರ ಮಗಳನ್ನು ಮದುವೆಯಾಗಿದ್ದ ಅನಾಸ್ ಆಕೆಗೆ ಡ್ಯಾನ್ಸ್ ಮಾಡಲು, ಹಾಡಲು ಒತ್ತಾಯ ಮಾಡುತ್ತಿದ್ದ. ಆದರೆ, ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಿಂದ ಬಂದ ಆಕೆಗೆ ಇದೆಲ್ಲ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಅನಾಸ್ ತನ್ನೊಂದಿಗೆ ಹೆಂಡತಿಯನ್ನೂ ಕರೆದುಕೊಂಡು ಹೋಗಿದ್ದ.
ತನ್ನ ಗಂಡ ತನಗೆ ಹಾಡಲು, ಡ್ಯಾನ್ಸ್ ಮಾಡಲು, ಪಾರ್ಟಿಗಳಿಗೆ ತುಂಡುಡುಗೆ ಹಾಕಲು ಒತ್ತಾಯ ಮಾಡುತ್ತಾನೆಂದು ಆತನ ಹೆಂಡತಿ ಮನೆಯಲ್ಲೂ ಹಲವು ಬಾರಿ ದೂರಿದ್ದಳು. ಈ ಬಗ್ಗೆ ಸ್ಥಳೀಯ ಪಂಚಾಯತ್ನಲ್ಲೂ ನ್ಯಾಯ ಕೇಳಿದ್ದಳು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ. ಇದೇ ವಿಷಯಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು.
2 ದಿನಗಳ ಹಿಂದೆ ಇದೇ ಕಾರಣಕ್ಕೆ ಅನಾಸ್ ತನ್ನ ಹಡಂಡತಿಗೆ ತ್ರಿವಳಿ ತಲಾಖ್ ನೀಡಿದ್ದ. ಬಳಿಕ ತನ್ನ ಮನೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಆತ ಬೆಂಕಿ ಹಚ್ಚಿಕೊಂಡಿದ್ದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ
