CoronaVirus: ಇಂಗ್ಲೆಂಡ್​ ನಂತರ ನೈಜೀರಿಯಾದಲ್ಲಿ ಪತ್ತೆಯಾಯ್ತು ಮತ್ತೊಂದು ಹೊಸ ಕೊರೋನಾ ಪ್ರಭೇದ!

ನೈಜೀರಿಯಾದಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೋನಾ ವೈರಸ್ ಬಗ್ಗೆ ಅಫ್ರಿಕಾದ ರೋಗ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದು, ಇದರ ಬಗ್ಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​ ಇದೀಗ ಇಡೀ ವಿಶ್ವವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. ಜಗತ್ತಿನಾದ್ಯಂತ ಮಿಂಚಿನ ವೇಗದಲ್ಲಿ ಹರಡಿದ್ದ ಈ ವೈರಸ್​ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತಾಗಿದೆ. ಭಾರತದಲ್ಲೂ ಸಹ 1.3 ಲಕ್ಷಕ್ಕೂ ಅಧಿಕ ಜನ ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಈ ಸೋಂಕಿಗೆ ಲಸಿಕೆಯನ್ನು ಸಂಶೋಧಿಸುವ ಕೆಲಸವೂ ನಡೆಯುತ್ತಿದೆಯಾದರೂ ಈ ವರೆಗೆ ಲಸಿಕೆಗಳು ಕ್ಲಿನಿಕಲ್​ ಟ್ರಯಲ್​ ಹಂತವನ್ನು ದಾಟಿಲ್ಲ. ಹೀಗಾಗಿ ಕೊರೋನಾದಿಂದ ತಪ್ಪಿಸಿಕೊಳ್ಳುವ ದಾರಿ ಕಾಣದಾಗಿದೆ. ಹೀಗಿರುವಾಗಲೇ ಇತ್ತೀಚೆಗೆ ಇಂಗ್ಲೆಂಡ್​ ಹೊಸ ರೂಪಾಂತರ ಪ್ರಭೇದದ ಕೊರೋನಾ ವೈರಸ್​ ಪತ್ತೆಯಾಗಿದ್ದು, ಎಲ್ಲಾ ದೇಶದ ಜನ ಬೆಚ್ಚಿಬಿದ್ದಿದ್ದಾರೆ. ಈ ನಡುವೆ ಇದೀಗ ನೈಜೀರಿಯಾದಲ್ಲಿ ಮತ್ತೊಂದು ಹೊಸ ಕೊರೋನಾ ಪ್ರಭೇದ ಪತ್ತೆಯಾಗಿದೆ ಎನ್ನಲಾಗುತ್ತಿದೆ.

ನೈಜೀರಿಯಾದಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೋನಾ ವೈರಸ್ ಬಗ್ಗೆ ಅಫ್ರಿಕಾದ ರೋಗ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದು, ಇದರ ಬಗ್ಗೆ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ. ಈಗಾಗಲೇ ರೂಪಾಂತರಿ ಕೊರೋನಾ ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ಹರಡುತ್ತಿದ್ದು, ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದ್ದು ವೈದ್ಯಕೀಯ ಲೋಕ ಮತ್ತೊಂದು ಸುತ್ತಿನ ಹೋರಾಟಕ್ಕೆ ತಯಾರಾಗಿದೆ.

ಎರಡು ಅಥವಾ ಮೂರು ಜನೆಟಿಕ್ ಸೀಕ್ವೆನ್ಸ್‌ಗಳ ಆಧಾರದಲ್ಲಿ ಹೊಸ ಪ್ರಭೇದವೊಂದರ ಉಗಮವಾಗಿರಬಹುದು ಎಂದು ಈಗಾಗಲೆ ನಿರ್ಧಾರಕ್ಕೆ ಬರಲಾಗಿದೆ. ಸೋಂಕು ಪ್ರಕರಣದ ಹೆಚ್ಚು ಮಾದರಿಗಳ ವಿಶ್ಲೇಷಣೆಯನ್ನು ನೈಜೀರಿಯ ರೋಗ ನಿಯಂತ್ರಣ ಕೇಂದ್ರ ಮತ್ತು ನೈಜೀರಿಯದಲ್ಲಿರುವ ಆಫ್ರಿಕನ್ ಸೆಂಟರ್ ಫಾರ್ ಜಿನೋಮಿಕ್ಸ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಸಂಸ್ಥೆಗಳು ನಡೆಸಲಿವೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಎರಡನೇ ಕೊರೋನಾ ವೈರಸ್​ ಪ್ರಭೇದ ಪತ್ತೆಯಾಗುತ್ತಿದ್ದಂತೆ ಭಾರತ ಬ್ರಿಟನ್​ನಿಂದ ಎಲ್ಲಾ ವಿಮಾನಯಾನವನ್ನು ರದ್ದು ಮಾಡಿದೆ. ಆದರೂ ಕಳೆದ ವಾರ ಬ್ರಿಟನ್​ನಿಂದ ಭಾರತಕ್ಕೆ ಆಗಮಿಸಿದ್ದ 7 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈ ನಡುವೆ ನೈಜೀರಿಯಾದಲ್ಲೂ ಮತ್ತೊಂದು ಹೊಸ ಕೊರೋನಾ ಪ್ರಭೇದ ಪತ್ತೆಯಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಹೀಗಾಗಿ ಈ ಸೋಂಕು ಮತ್ತಷ್ಟು ಹರಡದಂತೆ ತಡೆಯುವ ಸಲುವಾಗಿ ಕೇಂದ್ರ ಸರ್ಕಾರ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಮತ್ತೊಮ್ಮೆ ನಿಷೇಧಿಸಿ ದೇಶದಲ್ಲಿ ಮತ್ತೊಮ್ಮೆ ಲಾಕ್​ಡೌನ್ ಘೋಷಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *