ಶಿವಮೊಗ್ಗಕ್ಕೂ ಕಾಲಿಟ್ಟ ರೂಪಾಂತರಿ ಕೊರೋನಾ ವೈರಸ್; ಒಂದೇ ಕುಟುಂಬದ ನಾಲ್ವರಿಗೆ ಭಯಾನಕ ಸೋಂಕು ಪತ್ತೆ
Shimoga Coronavirus: ಡಿ. 22ರಂದು ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕುಟುಂಬದವರಿಗೆ ಡಿ. 23ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ಆದರೆ ಇಂದು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿದೆ.
ಬೆಂಗಳೂರು (ಡಿ. 30): ಇಂಗ್ಲೆಂಡ್ನಿಂದ ಕರ್ನಾಟಕಕ್ಕೆ ಬಂದಿರುವವರ ಪೈಕಿ ಹಲವರಿಗೆ ರೂಪಾಂತರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈಗಾಗಲೇ ಬೆಂಗಳೂರಿನಲ್ಲಿ ಮೂವರಿಗೆ ಬ್ರಿಟನ್ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆ ವೇಳೆ ಖಚಿತವಾಗಿದೆ. ಆ ರೋಗಿಗಳನ್ನು ಐಸೋಲೇಷನ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇದರ ನಡುವೆ ಶಿವಮೊಗ್ಗಕ್ಕೂ ರೂಪಾಂತರಿ ಕೊರೋನಾ ವೈರಸ್ ಕಾಲಿಟ್ಟಿದೆ. ಶಿವಮೊಗ್ಗದ ಒಂದೇ ಕುಟುಂಬದ ನಾಲ್ಕು ಮಂದಿಗೆ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಡಿ. 22ರಂದು ಬ್ರಿಟನ್ ನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕುಟುಂಬದವರಿಗೆ ಡಿ. 23ರಂದು ಕೊರೋನಾ ಸೋಂಕು ಪತ್ತೆಯಾಗಿತ್ತು. ಅವರಿಗೆ ಶಿವಮೊಗ್ಗದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿದೆ. ರೂಪಾಂತರ ವೈರಸ್ ಪತ್ತೆಯಾದ ಕುಟುಂಬದ ಮನೆ ಸುತ್ತ ಸ್ಯಾನಿಟೈಸ್ ಮಾಡಲಾಗಿದೆ. ಆ ಕುಟುಂಬ ವಾಸಿಸುತ್ತಿದ್ದ ಮನೆಯ ಸುತ್ತ 100 ಮೀ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ದಿನೇ ದಿನೇ ಕರ್ನಾಟಕದಲ್ಲಿ ಬ್ರಿಟನ್ ರೂಪಾಂತರ ಕೊರೋನಾ ಪತ್ತೆ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ತಲೆ ಬಿಸಿಯಾಗಿದೆ. ಕೊಡಗಿನಲ್ಲಿ ಬ್ರಿಟನ್ನಿಂದ ಬಂದ ಐವರು ನಾಪತ್ತೆಯಾಗಿದ್ದಾರೆ. ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿದ್ದಾರೆ. ಕಾವೇರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದ ಸಚಿವ ಬೊಮ್ಮಾಯಿ ಬ್ರಿಟನ್ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬ್ರಿಟನ್ನಿಂದ ಬಂದ ಕೆಲವರು ನಾಪತ್ತೆಯಾಗಿದ್ದಾರೆ. ಇದರಿಂದ ಕೊರೋನಾ ಮತ್ತಷ್ಟು ಹರಡುವ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಟ್ರೇಸ್ ಮಾಡಿ, ರಾಜ್ಯದಲ್ಲಿ ಬಿಗಿ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇದರ ಜೊತೆಗೆ ಹೊಸ ವರ್ಷ ಆಚರಣೆ ಹಿನ್ನೆಲೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ.