ಕರಪತ್ರ ಮೂಲಕ ವೈರಲ್ ಆಗಿದ್ದ ಗಂಗಮ್ಮ ಪಡೆದ ಮತಗಳೆಷ್ಟು ಗೊತ್ತಾ..?
ತನ್ನ ವಿಭಿನ್ನ ಕರಪತ್ರದ ಮೂಲಕವೇ ವೈರಲ್ ಆಗಿ ಫುಲ್ ಕುತೂಹಲ ಕೆರಳಿಸಿದ್ದ ಗಂಗಮ್ಮ, ತಾನು ಗೆದ್ದರೆ, ಸೋತರೆ ಮಾಡುವ ಕೆಲಸಗಳನ್ನು ಕರಪತ್ರದಲ್ಲಿ ಮುದ್ರಿಸಿ ಸಖತ್ ಸದ್ದು ಮಾಡ್ತಿದ್ರು. ಈಗ ಆಕೆಯೆ ಎಷ್ಟು ಮತ ಬಿದ್ದಿದೆ ಆಕೆ ಗೆದ್ದರಾ ಸೋತರಾ ಎನ್ನುವ ಕುತೂಹಲ ಜನರಲ್ಲಿ ಮನೆಮಾಡಿತ್ತು, ಈಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ತುಮಕೂರು ಜಿಲ್ಲೆಯ ಹೆಬ್ಬೂರು ಗ್ರಾಮ ಪಂಚಾಯತಿಯ ಕಲ್ಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಎಚ್ ಗಂಗಮ್ಮ ಅವರ ಕರಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಗಮನ ಸೆಳೆದಿತ್ತು. ಕರಪತ್ರದಲ್ಲಿ ಆಕೆ ಗೆದ್ದರೆ ಏನು ಮಾಡುವೆ ? ಸೋತರೆ ಏನು ಮಾಡುವೆ ಎಂದು ಮುದ್ರಿಸಿದ್ದರು.
ಗೆದ್ದರೆ ಕರೇತಿಮ್ಮರಾಯಸ್ವಾಮಿ ದೇವಸ್ಥಾನದ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಮಾಡುವೆ, ಅರಳೀಕಟ್ಟೆ ಕಟ್ಟಿಸುವೆ, ಚಿಕ್ಕಸಾಸಲಯ್ಯನ ಮನೆ ಹತ್ತಿರದಿಂದ ದೊಡ್ಡಕರೇಕಲ್‌ವರೆಗೆ ರಸ್ತೆ ಮಾಡಿಸುವೆ, ಊರ ಮುಂದೆ ಮಳೆ ನೀರು ರಸ್ತೆಗೆ ಹರಿಯದೆ ಸರಾಗವಾಗಿ ಹರಿಯಲು ಸಗ್ಗಯ್ಯನ ತಿಪ್ಪಾಳದಿಂದ ಹೊಂಬಯ್ಯನ ಗದ್ದೆವರೆಗೆ ಸಿಸಿ ಚರಂಡಿ ಮಾಡಿಸುವೆ ಎಂದು ತಿಳಿಸಿದ್ದರು.
ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡಿಸುವೆ, ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಪಡೆದಿರುವ 40 ಕುಟುಂಬಗಳ ಮಾಸಾಶನ ಹಣ ನಿಲ್ಲಿಸುವೆ, ಸರ್ವೆ ನಂ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವೆ, ಕಲ್ಕೆರೆ ಗ್ರಾಮ ಠಾಣಾ ಜಾಗವನ್ನು ಯಾವುದೇ ಮೂಲ ದಾಖಲಾತಿ ಇಲ್ಲದೆ 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು 1948ರ ಗ್ರಾಮದ ಹೌಸ್‌ಲೀಸ್ಟ್‌ನಂತೆ ತೆರವುಗೊಳಿಸಲು ಹೋರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು
ಪಾದರಕ್ಷೆ ಗುರುತು ಪಡೆದಿದ್ದ ಗಂಗಮ್ಮಗೆ ಕಲ್ಕೆರೆ ಕ್ಷೇತ್ರದಲ್ಲಿ ಕೇವಲ 6 ಮತ ಬಿದ್ದಿವೆ. ದೊಡ್ಡಗುಣಿ ಕ್ಷೇತ್ರದಲ್ಲಿ ಸಾಮಾನ್ಯ ಮೀಸಲಾಗಿದ್ದ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಗಂಗಮ್ಮಗೆ 2 ಮತ ಬಂದಿದೆ. ಒಟ್ಟಿನಲ್ಲಿ ಗಂಗಮ್ಮ ಗೆದ್ದು ಮಾಡುವ ಕೆಲಸಕ್ಕಿಂತ ಸೋತು ಮಾಡುವ ಕೆಲಸವೇ ಮುಖ್ಯ ಎಂದು ಮತದಾರರು ಯೋಚಿಸಿರಬೇಕು. ಹಾಗಾಗಿ ಹೀನಾಯವಾಗಿ ಸೋತಿದ್ದಾರೆ.