ಕೋವಿಡ್ ಲಸಿಕೆಗಳ ಮುಕ್ತ ಆಮದು, ರಫ್ತಿಗೆ ಕೇಂದ್ರ ಸರ್ಕಾರ ಅನುಮತಿ
ಕೊರೋನಾ ಲಸಿಕೆಯ ತ್ವರಿತ ಪೂರೈಕೆ ಹಾಗೂ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಯಾವುದೇ ಸುಂಕದ ಮಿತಿಯಳಿಲ್ಲದೆ ಲಸಿಕೆಯ ಮುಕ್ತ ಆಮದು ಮತ್ತು ರಫ್ತಿಗೆ ಅನುಮತಿಸಿದೆ.
ನವದೆಹಲಿ: ಕೊರೋನಾ ಲಸಿಕೆಯ ತ್ವರಿತ ಪೂರೈಕೆ ಹಾಗೂ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಯಾವುದೇ ಸುಂಕದ ಮಿತಿಯಳಿಲ್ಲದೆ ಲಸಿಕೆಯ ಮುಕ್ತ ಆಮದು ಮತ್ತು ರಫ್ತಿಗೆ ಅನುಮತಿಸಿದೆ. ಎಕ್ಸ್ಪ್ರೆಸ್ ಕಾರ್ಗೋ ಕ್ಲಿಯರೆನ್ಸ್ ಸಿಸ್ಟಮ್ (ಇಸಿಸಿಎಸ್) ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಕೊರಿಯರ್ ಮೂಲಕ ಕೊರೋನ ಲಸಿಕೆಗಳನ್ನು ಆಮದು/ರಫ್ತು ಮಾಡಲು ಅನುಕೂಲವಾಗುವಂತೆ ಕೇಂದ್ರ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ನಿಯಮಗಳನ್ನು ತಿದ್ದುಪಡಿ ಮಾಡಿದೆ.
ಕೊರೋನಾ ಗೆ ಸಂಬಂಧಿಸಿದಂತೆ ಲಸಿಕೆಗಳ ಸುಂಕ ಮುಕ್ತವಾದ ಆಮದು ಮತ್ತು ರಫ್ತಿಗೆ ಅನುಮತಿಸಲಾಗಿದೆ’ ಎಂದು ತಿದ್ದುಪಡಿ ಮಾಡಿದ ಕೊರಿಯರ್ ಆಮದು ಮತ್ತು ರಫ್ತು (ಎಲೆಕ್ಟ್ರಾನಿಕ್ ಡಿಕ್ಲರೇಷನ್ ಆಂಡ್ ಪ್ರೊಸೆಸಿಂಗ್) ತಿದ್ದುಪಡಿ ನಿಯಮಗಳು, 2020 ರಲ್ಲಿ ತಿಳಿಸಲಾಗಿದೆ. ಕೊರೋನಾ ಪ್ರಪಂಚದಾದ್ಯಂತ ಕಸ್ಟಮ್ಸ್ ಮತ್ತು ಇತರ ಕ್ಷೇತ್ರಗಳಿಗೆ ದೊಡ್ಡ ಸವಾಲುಗಳನ್ನು ಒಡ್ಡಿದೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಲಸಿಕೆಗಳನ್ನು ಸಮರ್ಥವಾಗಿ ಪೂರೈಸುವುದು ಮತ್ತು ವಿತರಿಸುವುದು ನಿರ್ಣಾಯಕ ಅಗತ್ಯವಾಗಿದೆಎಂದು ಹೇಳಲಾಗಿದೆ.
‘ಲಸಿಕೆಗಳನ್ನು ನಿಯಂತ್ರಿತ ತಾಪಮಾನದಲ್ಲಿ ಸಂಗ್ರಹಿಸಿ ಸಾಗಿಸಬೇಕಾಗಿರುವುದು ಮತ್ತು ಈ ಪ್ರಕ್ರಿಯೆಯಲ್ಲಿ ಅನೇಕ ಪಾಲುದಾರರು ಪಾಲ್ಗೊಳ್ಳುವುದರಿಂದ ಸವಾಲುಗಳು ಹೆಚ್ಚಲಿದೆ.ಲಸಿಕೆಗಳನ್ನು ತ್ವರಿತವಾಗಿ ಸ್ಥಳಾಂತರಿಸಲು ಪರಿಣಾಮಕಾರಿಯಾದ ಗಡಿಯಾಚೆಗಿನ ಕಾರ್ಯವಿಧಾನಗಳನ್ನು ಜಾರಿಗೆ ತರಲು ಈ ಸಡಿಲಿಕೆ ಅಗತ್ಯವಾಗಿದೆ’ಎಂದು ಸಿಬಿಐಸಿ ಹೇಳಿದೆ.
ಎಎಂಆರ್ ಜಿ ಆಂಡ್ ಅಸೋಸಿಯೇಟ್ಸ್ ಹಿರಿಯ ಪಾಲುದಾರ ರಜತ್ ಮೋಹನ್ ಮಾತನಾಡಿ, ಜಾಗತಿಕ ಔಷಧಿ ತಯಾರಿಕಾ ಕಂಪನಿಗಳು ಕೊರೋನಾ ಲಸಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ನಿಯೋಜಿಸುವ ಹಂತದಲ್ಲಿದೆ.”ಜಾಗತಿಕ ಲಾಜಿಸ್ಟಿಕ್ಸ್ ಮತ್ತು ಕಸ್ಟಮ್ ಕ್ಲಿಯರೆನ್ಸ್ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕೊರಿಯರ್ ಆಮದು ಮತ್ತು ರಫ್ತು ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ, ಇದರಲ್ಲಿ ಯಾವುದೇ ಸುಂಕದ ಮಿತಿಯಿಲ್ಲದೆ ಕೊರೋನಾ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ರಫ್ತು ಮಾಡುವ ಅನುಮತಿ ಇದೆ” ಎಂದರು,