ಕೋವಿಡ್-19 ಹಾಟ್ ಸ್ಪಾಟ್ ಆಗಿ ಮಾರ್ಪಟ್ಟ ಪಂಚತಾರಾ ಹೊಟೆಲ್; 85 ಸಿಬ್ಬಂದಿಗೆ ಸೋಂಕು
ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದ್ದ ಚೆನ್ನೈನಲ್ಲಿ ಮತ್ತೆ ಸಾಂಕ್ರಾಮಿಕ ಮಾಹಾಮಾರಿ ಸುದ್ದಿ ಮಾಡುತ್ತಿದ್ದು, ಇಲ್ಲಿನ ಖ್ಯಾತನಾಮ ಲಕ್ಸುರಿ ಹೊಟೆಲ್ ನ 85 ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ.
ಚೆನ್ನೈ: ಕೋವಿಡ್ ಸೋಂಕು ಪ್ರಕರಣಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದ್ದ ಚೆನ್ನೈನಲ್ಲಿ ಮತ್ತೆ ಸಾಂಕ್ರಾಮಿಕ ಮಾಹಾಮಾರಿ ಸುದ್ದಿ ಮಾಡುತ್ತಿದ್ದು, ಇಲ್ಲಿನ ಖ್ಯಾತನಾಮ ಲಕ್ಸುರಿ ಹೊಟೆಲ್ ನ 85 ಸಿಬ್ಬಂದಿಗೆ ಸೋಂಕು ಒಕ್ಕರಿಸಿದೆ.
ಈ ಬಗ್ಗೆ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ಮಾಹಿತಿ ನೀಡಿದ್ದು, ಕಳೆದ ಡಿಸೆಂಬರ್ 15ರಿಂದ ಜನವರಿ 1ರವರೆಗೂ ಚೆನ್ನೈನ ಖ್ಯಾತ ಐಟಿಸಿ ಗ್ರ್ಯಾಂಡ್ ಚೋಳ ಹೊಟೆಲ್ ನ ಬರೊಬ್ಬರಿ 85 ಮಂದಿಗೆ ಕೊರೋನ ಸೋಂಕು ಒಕ್ಕಿರಿಸಿದೆ. ಜಿಸಿಸಿ ನೀಡಿರುವ ಮಾಹಿತಿ ಅನ್ವಯ ಹೊಟೆಲ್ ನಲ್ಲಿ ಕೆಲಸ ಮಾಡುವ ಒಟ್ಟು 609 ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 85 ಸಿಬ್ಬಂದಿಗಳಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಕಳೆದ ಡಿಸೆಂಬರ್ 10ರಿಂದ ಹೊಟೆಲ್ ಗೆ ಆಗಮಿಸಿದ್ದ ಗ್ರಾಹಕರ ಮಾಹಿತಿ ಕಲೆಹಾಕಲಾಗುತ್ತಿದ್ದು, ಪ್ರಸ್ತುತ ಹೊಟೆಲ್ ನಲ್ಲಿ ತಂಗಿರುವ ಎಲ್ಲಾ ಅತಿಥಿಗಳ ಸ್ಯಾಚುರೇಶನ್ ಪರೀಕ್ಷೆಯನ್ನು ನಡೆಸಲು ಗ್ರೇಟರ್ ಚೆನ್ನೈ ನಿಗಮಕ್ಕೆ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ತಿಳಿಸಿದ್ದಾರೆ.
ಐಟಿಸಿ ಗ್ರ್ಯಾಂಡ್ ಚೋಳ ಪ್ರಕಟಣೆಯಲ್ಲಿ, ಅಧಿಕಾರಿಗಳು ಆದೇಶಿಸಿರುವ ಮಾನದಂಡಗಳಿಗೆ ಅನುಸಾರವಾಗಿ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಗರಿಷ್ಠ ಸಾಮಾಜಿಕ ಅಂತರ ಪಾಲನೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಭಾಂಗಣದ ಶೇಕಡಾ 50 ರಷ್ಟು ಸಿಬ್ಬಂದಿ ಸಾಮರ್ಥ್ಯವನ್ನು ಮಾತ್ರ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಡಿಸೆಂಬರ್ 15 ರಂದು ಹೊಟೆಲ್ ನ ಬಾಣಸಿಗರಲ್ಲಿ ಮೊದಲ ಬಾರಿಗೆ ಸೋಂಕು ದೃಢಪಟ್ಟಿತ್ತು. ಡಿಸೆಂಬರ್ 31, 2020 ಮತ್ತು ಜನವರಿ 1, 2021 ರಂದು 16 ಮತ್ತು 13 ಪ್ರಕರಣಗಳು ವರದಿಯಾಗಿವೆ. ಹೋಟೆಲ್ ಮತ್ತು ಸಿಬ್ಬಂದಿಗಳ ನಿವಾಸಗಳಲ್ಲಿ ಮತ್ತು ಸುತ್ತಮುತ್ತಲಿನ ಒಟ್ಟು 609 ಮಾದರಿಗಳನ್ನು ಅಧಿಕಾರಿಗಳು ಪರೀಕ್ಷಿಸಿದ್ದು ಈ ಪೈಕಿ 85 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.