ಕೋವಿಡ್ ಲಸಿಕೆಗೆ ಅನುಮೋದನೆ; ಪ್ರತಿಯೊಬ್ಬ ಭಾರತೀಯನಿಗೂ ಗರ್ವದ ವಿಚಾರ ಎಂದ ಪ್ರಧಾನಿ ಮೋದಿ
ಕೊನೆಗೂ ಭಾರತದಲ್ಲಿ 2 ಕೋವಿಡ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಸಂಬಂಧ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ.
ನವದೆಹಲಿ: ಕೊನೆಗೂ ಭಾರತದಲ್ಲಿ 2 ಕೋವಿಡ್ ಲಸಿಕೆಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಸಂಬಂಧ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಸಂತಸ ಹಂಚಿಕೊಂಡಿದ್ದಾರೆ.
ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ. ಈ ವಿಚಾರವನ್ನು ಡಿಸಿಜಿಐ ಸುದ್ದಿಗೋಷ್ಠಿಯ ಮೂಲಕ ಪ್ರಕಟಿಸಿದ್ದು, ಅತ್ತ ಘೋಷಣೆಯಾಗುತ್ತಲೇ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ರತಿಯೊಬ್ಬ ಭಾರತೀಯನಿಗೂ ಇದು ಗರ್ವದ ವಿಚಾರವಾಗಿದೆ. ಸ್ವದೇಶಿ ನಿರ್ಮಿತ ಲಸಿಕೆಗಳು ತುರ್ತು ಬಳಕೆಯ ಅನುಮೋದನೆ ಪಡೆದಿವೆ. ಇದರಿಂದ ಸಾವಿರಾರು ಜೀವ ಉಳಿಸಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
‘ತುರ್ತು ಬಳಕೆಯ ಅನುಮೋದನೆ ನೀಡಲಾದ ಎರಡು ಲಸಿಕೆಗಳನ್ನು ಭಾರತದಲ್ಲಿ ತಯಾರಿಸಲಾಗಿದೆಯೆ ಎಂಬುದು ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ ಎನಿಸುತ್ತದೆ! ಆತ್ಮನಿರ್ಭರ ಭಾರತದ ಕನಸನ್ನು ಈಡೇರಿಸಲು ನಮ್ಮ ವೈಜ್ಞಾನಿಕ ಸಮುದಾಯ ಪಟ್ಟ ಸಾಹಸ ಮತ್ತು ಉತ್ಸಾಹವನ್ನು ಇದು ತೋರಿಸುತ್ತದೆ. ಈ ಅತ್ಯುತ್ತಮ ಕೆಲಸಕ್ಕಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ, ವಿಜ್ಞಾನಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು ಮತ್ತು ಎಲ್ಲಾ ಕೊರೋನಾ ಯೋಧರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.