ಕಲಬುರ್ಗಿ ಮಗು ಸಾವು; ಸಂತ್ರಸ್ಥ ಕುಟುಂಬದ ಜೊತೆ ಪಿಎಸ್ಐ ವೈರತ್ವ: ಅಜಯ್ ಸಿಂಗ್ ಗಂಭೀರ ಆರೋಪ

ಕಲಬುರ್ಗಿ: ಸಂತ್ರಸ್ಥ ಸಂತೋಷ್ ಕುಟುಂಬದ ಜೊತೆ ಪಿಎಸ್ ಐ ವೈರತ್ವ ಇದೇ ಮಗು ಸಾವಿಗೆ ಕಾರಣ ಎಂದು ಜೇವರ್ಗಿ ಶಾಸಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಅಜಯಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಕಲಬುರ್ಗಿ ಜೈಲಿನಲ್ಲಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿಯಿಂದಲೂ ನಡೆಯುತ್ತಿರುವ ಪೋಷಕರು ಮತ್ತು ಸಂಬಂಧಿಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಜಯ್ ಸಿಂಗ್ ಅವರು, ‘ಸಂತೋಷ್ ಮೇಲೆ ಮೊದಲಿನಿಂದಲೂ ಪಿ.ಎಸ್.ಐ. ಹೂಗಾರ ವೈರತ್ವವಿದೆ. ಅದೇ ಕಾರಣಕ್ಕಾಗಿ ಸಂತೋಷ್ ಜೊತೆ ಅವರ ಮನೆಯಲ್ಲಿದ್ದ ಮಹಿಳೆಯರನ್ನೂ ಬಂಧಿಸಿದ್ದಾನೆ. ನಾನೇ ಖುದ್ದು ಫೋನ್ ಮಾಡಿ ಪುರುಷರನ್ನು ಬೇಕಿದ್ದರೆ ಬಂಧಿಸಿ. ಆದರೆ ಅಮಾಯಕ ಮಹಿಳೆಯರನ್ನು ಬಂಧಿಸಬೇಡಿ ಎಂದಿದ್ದೆ. ನಾನು ಎಷ್ಟು ಬಾರಿ ದೂರವಾಣಿ ಕರೆ ಮಾಡಿ ಹೇಳಿದ್ದರೂ ಕೇಳದೆ ಪಿ.ಎಸ್.ಐ. ಉದ್ಧಟತನ ತೋರಿದ್ದಾರೆ. ಮಹಿಳೆಯರನ್ನು ಬಂಧಿಸುವ ಜೊತೆಗೆ ಮಕ್ಕಳನ್ನೂ ಕರೆದೊಯ್ದೋ ಅವಶ್ಯಕತೆ ಇರಲಿಲ್ಲ. ಮಗುವಿಗೆ ಆರೋಗ್ಯ ಸರಿಯಿಲ್ಲವೆಂದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸೋ ಸೌಜನ್ಯ ಕೂಡ ತೋರಿಲ್ಲ. ಇದೀಗ ಅಮಾಯಕ ಮಗು ಸಾವನ್ನಪ್ಪಿದ್ದು, ಮಗು ಸಾವಿಗೆ ಪಿ.ಎಸ್.ಐ. ಹೂಗಾರ ಕಾರಣ. ಕೂಡಲೇ ಮಂಜುನಾಥ ಹೂಗಾರ್ ರನ್ನು ವಜಾಗೊಳಿಸಬೇಕು. ಮೃತ ಮಗುವಿನ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಜಿಮ್ಸ್ ಆಸ್ಪತ್ರೆ ಎದರು ಪ್ರತಿಭಟನೆ ಮುಂದುವರೆದಿದ್ದು, ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ. ಸಿಮಿ ಮರಿಯಮ್ ಜಾರ್ಜ್, ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು.  ಆದರೆ ಪಟ್ಟು ಬಿಡದ ಪ್ರತಿಭಟನಾಕಾರರು ಮಗುವಿನ ಸಾವನ್ನು ಕೊಲೆ ಎಂದು ಪರಿಗಣಿಸಬೇಕು. ಪಿ.ಎಸ್.ಐ. ಮಂಜುನಾಥ ಹೂಗಾರನ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.  ಪ್ರತಿಭಟನಾ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *