ಬೆಂಗಳೂರಿನ ಪುರಾತನ ದೇಗುಲದಲ್ಲಿ 800 ವರ್ಷಗಳ ವಿಗ್ರಹಗಳು ಪತ್ತೆ!
ಬೆಂಗಳೂರು: ಬೆಂಗಳೂರಿನ ಅತ್ಯಂತ ಪುರಾತನ ದೇವಾಲಯವೊಂದರಲ್ಲಿ 800 ವರ್ಷಗಳಷ್ಟ ಹಳೆಯದಾದ ವಿಗ್ರಹಗಳು ಪತ್ತೆಯಾಗಿವೆ.
ಬೆಂಗಳೂರಿನ ಅತ್ಯಂತ ಪುರಾತನ ದೇಗುಲಗಳಲ್ಲಿ ಒಂದಾಗಿರುವ ಜಲಕಂಠೇಶ್ವರ ದೇಗುಲದಲ್ಲಿ ಈ ವಿಗ್ರಹಗಳು ಪತ್ತೆಯಾಗಿದ್ದು, ದೇವಾಲಯದ ಹಿಂಭಾಗ ಕಟ್ಟಡ ಕಾಮಗಾರಿಗಾಗಿ ಪಾಯ ತೆಗೆಯುವಾಗ ಮದ್ದುಗುಂಡುಗಳು, ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ. ಕಲಾಸಿಪಾಳ್ಯದ ಟಿಪ್ಪು ಕೋಟೆ ಬಳಿ ಇರುವ 1500 ವರ್ಷಗಳ ಹಳೆಯದಾದ ಈ ಜಲಕಂಠೇಶ್ವರ ದೇವಾಲಯದ ಬಳಿ ಪಾಯ ತೆಗೆಯುವಾಗ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಪತ್ತೆಯಾಗಿರುವ ವಿಗ್ರಹಗಳನ್ನು ಪುರಾತತ್ವ ಇಲಾಖೆಯವರು ಪರಿಶೀಲನೆ ನಡೆಸಿದ್ದಾರೆ. ಉತ್ಖನನ ಮಾಡಬೇಕೆ, ಬೇಡವೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕೂಡ ಈ ಭಾಗದಲ್ಲಿ ಬಿಬಿಎಂಪಿಯವರು ಕಾಮಗಾರಿ ನಡೆಸುವಾಗ ದೊಡ್ಡ ಮಟ್ಟದ ಮದ್ದುಗುಂಡುಗಳು ದೊರಕಿದ್ದವು. ಈಗ ಪುರಾತನ ಕಾಲದ ಶಿಲಾ ವಿಗ್ರಹಗಳು ಕಂಡುಬಂದಿರುವುದು ಕುತೂಹಲ ಮೂಡಿಸಿದೆ. ಇನ್ನಷ್ಟು ಉತ್ಖನನ ಮಾಡಿದರೆ ಮತ್ತಷ್ಟು ವಿಗ್ರಹಗಳು, ಹಳೆಯ ಕಾಲದ ಪಳೆಯುಳಿಕೆಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅರ್ಧಕೆತ್ತಿದ ಶಿವಪಾರ್ವತಿ ಮೂರ್ತಿಗಳು
ಇನ್ನು ಇಲ್ಲಿ ಪತ್ತೆಯಾದ ವಿಗ್ರಹ ಶಿವಪಾರ್ವತಿ ಮತ್ತು ನಂದಿಯ ಮೂರ್ತಿಗಳಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಬಗ್ಗೆ ಮಾತನಾಡಿದ ಪುರಾತತ್ವ ಇಲಾಖೆಯ ನಿರ್ದೇಶಕ ಡಾ. ಆರ್ ಗೋಪಾಲ್ ಅವರು ಪ್ರಸ್ತುತ ಪತ್ತೆಯಾಗಿರುವ ವಿಗ್ರಹದ ಪ್ಯಾನೆಲ್ ಜಲಕಂಠೇಶ್ವರ ದೇಗುಲಕ್ಕೆ ಸೇರಿದ್ದಾಗಿರಬಹುದು. ಅರ್ಧಕೆತ್ತಿದ ವಿಗ್ರಹಗಳು ಪತ್ತೆಯಾಗಿವೆ. ನಮ್ಮ ಸರ್ವೇ ಪ್ರಕಾರ ದೇಗುಲಕ್ಕೆ ಸೇರಿದ ಕಲ್ಯಾಣಿ ಇತ್ತು ಎನ್ನಲಾಗಿದೆ. ಉತ್ಖನನ ನಡೆದರೆ ಕಲ್ಯಾಣಿ ಕೂಡ ಪತ್ತೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಪತ್ತೆಯಾಗಿರುವ ವಿಗ್ರಹಗಳವ್ನು ಇಲಾಖೆಯ ಮ್ಯೂಸಿಯಂ ಗೆ ರವಾನಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುತ್ತದೆ.
ಟಿಪ್ಪುಕಾಲದ ಮದ್ದುಗುಂಡುಗಳು ಪತ್ತೆಯಾಗಿಲ್ಲ
ಇನ್ನು ವಿಗ್ರಹ ಪತ್ತೆಯಾದ ಅದೇ ಜಾಗದಲ್ಲಿ ಟಿಪ್ಪು ಸುಲ್ತಾನ್ ಕಾಲದ ಮದ್ದು ಗುಂಡುಗಳು ಕೂಡ ಪತ್ತೆಯಾಗಿವೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಸುದ್ದಿ ವೈರಲ್ ಆಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ಅಂತಹ ಯಾವುದೇ ವಸ್ತುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ತರಗತಿ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಕಾಮಗಾರಿ
ಇನ್ನು ಪ್ರಸ್ತುತ ಪತ್ತೆಯಾಗಿರುವ ವಿಗ್ರಹಗಳು ಪಕ್ಕದಲ್ಲೇ ಇರುವ ವಾಣಿವಿಲಾಸ ಸರ್ಕಾರಿ ಕಾಲೇಜಿನ ತರಗತಿ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಕಾಮಗಾರಿ ವೇಳೆ ಪತ್ತೆಯಾಗಿದೆ. ಸುಮಾರು 55 ಲಕ್ಷ ರೂ ವೆಚ್ಚದಲ್ಲಿ ತರಗತಿಗಳ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ವಿಗ್ರಹ ಪತ್ತೆಯಾದ ಕಾರಣ ಇದೀಗ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.
ಜಲಕಂಠೇಶ್ವರ ದೇವಾಲಯ ಅತ್ಯಂತ ಪುರಾತನ ದೇವಾಲಯವಾಗಿದ್ದು, ದೇ ದೇವಾಲಯಕ್ಕೆ ಭೇಟಿ ನೀಡಿ ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಪ್ರತೀತಿ ಇದೆ. ಈ ದೇವಾಲಯ 1500 ವರ್ಷಗಳಿಗೂ ಹಳೆಯದಾಗಿದ್ದು, ಈ ಭಾಗದಲ್ಲಿ ನಿಧಿ ಇದೆ ಎಂದು ಹೇಳಲಾಗಿತ್ತು. ಟಿಪ್ಪು ಕೂಡ ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಿದ್ದ ಪೂಜೆ-ಪುನಸ್ಕಾರಗಳನ್ನು ಮಾಡುತ್ತಿದ್ದನೆಂದು ಹೇಳಲಾಗಿದೆ.