ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಸಂಚಾರ ಆರಂಭ: ಪ್ರಯಾಣ ಬೆಳೆಸಿದ ಕೆಎಸ್ ಆರ್-ದೇವನಹಳ್ಳಿ ಡೆಮು ರೈಲು
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹಾಲ್ಟ್ ಸ್ಟೇಷನ್ ಗೆ ರೈಲ್ವೆ ಸೇವೆ ಸೋಮವಾರ ಆರಂಭವಾಗಿದ್ದು, ಕೆಎಸ್ಆರ್-ದೇವನಹಳ್ಳಿ ಡೆಮು ರೈಲು ಇಂದು ಬೆಳಗ್ಗೆ 6.02ಕ್ಕೆ ತಲುಪಿತು.
ವಿಮಾನ ನಿಲ್ದಾಣ ಕ್ಯಾಂಪಸ್ ಒಳಗೆ 6 ಕಡೆ ರೈಲು ನಿಲುಗಡೆಯಾಗಿದೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಪ್ರಯಾಣಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.
ಹಲವು ಪ್ರಯಾಣಿಕರು ಆರಂಭ ದಿನವಾದ ಇಂದು ರೈಲಿನಲ್ಲಿ ಪ್ರಯಾಣಿಸಿ ಸಂತೋಷಪಟ್ಟರು. ಮೊದಲ ಬೋಗಿಯಲ್ಲಿ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಇಂದು ನಸುಕಿನ ಜಾವ ಪ್ರಯಾಣಿಸಿದರು.
ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಟೇಷನ್ ನಿಂದ ಪ್ರಯಾಣಿಸಿದರು. ರೈಲ್ವೆ ಸೀಟುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೆಂಪು ಬಣ್ಣದಿಂದ ಗೆರೆ ಎಳೆಯಲಾಗಿತ್ತು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಹಾಲ್ಟ್ ಸ್ಟೇಷನ್ ನಲ್ಲಿ ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್ ಕೌಂಟರ್ ನಿಂದ ಹಿಡಿದು ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂದು ಮುಂಜಾನೆ 4.45ಕ್ಕೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟ ಮೊದಲ ರೈಲು 6 ಗಂಟೆ 2 ನಿಮಿಷಕ್ಕೆ ಕೆಐಎಡಿ ತಲುಪಿದೆ.
ಈ ವೇಳೆ ಸಂಸದ ಪಿ.ಸಿ ಮೋಹನ್ ಸೇರಿದಂತೆ ಮತ್ತಿತರರು ಇದಕ್ಕೆ ಸಾಕ್ಷಿಯಾದರು. ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ.ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಉಪನಗರ ರೈಲುಗಳು ಕಾರ್ಯಚರಣೆ ಮಾಡಲಿವೆ.
ಕೆಎಸ್‌ಆರ್‌ನಿಂದ 10 ರೂಪಾಯಿ ಹಾಗೂ ಕಂಟೋನ್ಮೆಂಟ್‌ನಿಂದ 15 ರೂಪಾಯಿಗೆ ಹಾಲ್ಟ್ ಸ್ಟೇಷನ್ ತಲುಪಬಹುದಾಗಿದೆ.ಹಾಲ್ಟ್ ಸ್ಟೇಷನ್ ನಿಂದ ವಿಮಾನ ನಿಲ್ದಾಣಕ್ಕೆ ೫ ಕಿಲೋಮೀಟರ್ ದೂರವಿದ್ದು, ಬಿಐಎಎಲ್ ನಿಂದ ಉಚಿತ ಬಸ್ ಸೇವೆ ಕಲ್ಪಿಸಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಶ್ ಗೋಯಲ್, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಾಲ್ಟ್ ಸ್ಟೇಷನ್ ರೈಲು ನಿಲ್ದಾಣ ಪ್ರಯಾಣಿಕರ ಸೇವೆಗೆ ಇಂದಿನಿಂದ ಮುಕ್ತವಾಗಿದೆ. ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದ್ದು, ಜನ ದಟ್ಟಣೆಯನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.