ಗಣರಾಜ್ಯೋತ್ಸವದಂದು ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು..!
ನವದೆಹಲಿ : ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 5 ಎಕರೆ ಭೂಮಿಯನ್ನು ನೀಡಿತ್ತು, ಆದರೆ ಮಸೀದಿ ನಿರ್ಮಾಣ ಕಾರ್ಯ ಮಾತ್ರ ಪ್ರಾರಂಭವಾಗಿರಲಿಲ್ಲ, ಇದೀಗ 2021ರರ ಗಣರಾಜ್ಯೋತ್ಸವ ದಿನದಂದು, ಬಾಬ್ರಿ ಮಸೀದಿ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗುವುದು ಎಂದು, ಬಾಬ್ರಿ ಮಸೀದಿ ನಿರ್ಮಾಣ ಸಮಿತಿ ತಿಳಿಸಿದೆ. ಸಂವಿಧಾನ ಅಂಗೀಕಾರವಾದ ದಿನ ಅತ್ಯಂತ ಮಹತ್ವದ್ದು ಆದ್ದರಿಂದ ಅದೇ ದಿನ ಮಸೀದಿ ನಿರ್ಮಾಣಕ್ಕೆ ನಾವು ಅಡಿಗಲ್ಲು ಹಾಕಲಿದ್ದೇವೆ ಎಂದು IISF ಕಾರ್ಯದರ್ಶಿ ಅತರ್ ಹುಸೇನ್ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 9ರಂದು ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ ಜಾಗದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಅನುಮತಿ ನೀಡಿತ್ತು. ಇದೇ ವೇಳೆ ಮಸೀದಿ ನಿರ್ಮಾಣಕ್ಕಾಗಿ ಸುನ್ನಿ ವಕ್ಫ್ ಬೋರ್ಡ್ಗೆ ಐದು ಎಕರೆ ಪರ್ಯಾಯ ಜಾಗವನ್ನು ನೀಡಬೇಕು ಎಂದು ಸುಪ್ರೀಂ ಕೇಂದ್ರ ಸರ್ಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು. ಇದೇ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪ್ರಮುಖ ಸ್ಥಳದಲ್ಲಿ ಹೊಸ ಮಸೀದಿ ನಿರ್ಮಾಣವಾಗಲಿದೆ.
ಮಸೀದಿ ನಿರ್ಮಾಣದ ನೀಲನಕ್ಷೆ ಈಗಾಗಲೇ ಸಿದ್ಧವಾಗಿದ್ದು, ಏಕಕಾಲದಲ್ಲಿ 2 ಸಾವಿರ ಮಂದಿ ಈ ಮಸೀದಿಯಲ್ಲಿ ನಮಾಝ್ ಮಾಡಲು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಲಾಗಿದೆ. ಜೊತೆಯಲ್ಲೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಗ್ರಂಥಾಲಯ ಹಾಗೂ ವಿಸ್ತಾರವಾದ ಅಡುಗೆಕೋಣೆಯೂ ಇರಲಿದೆ. ಮಸೀದಿಯ ನೀಲನಕ್ಷೆಯನ್ನು ಶನಿವಾರ ಬಿಡುಗಡೆಗೊಳಿಸಲಾಗುವುದು ಎಂದು ಟ್ರಸ್ಟ್ನ ವಕ್ತಾರರು ತಿಳಿಸಿದ್ದಾರೆ.