ಗುಜರಾತ್: ಹಿರಿಯ ಕಾಂಗ್ರೆಸ್ ನಾಯಕ ಮಾಧವ್ ಸಿಂಗ್ ಸೋಲಂಕಿ ವಿಧಿವಶ

ಅಹ್ಮದಾಬಾದ್: ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಾಧವ್ ಸಿಂಗ್ ಸೋಲಂಕಿ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು

ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಮಾಧವ್ ಸಿಂಗ್ ಸೋಲಂಕಿ ನಿಧನರಾಗಿದ್ದಾರೆ. ಸೋಲಂಕಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ನಾಲ್ಕು ಬಾರಿ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ಕಾಂಗ್ರೆಸ್ ಪಕ್ಷ ಪ್ರಭಾವಿ ನಾಯಕರಾಗಿದ್ದ ಸೋಲಂಕಿ ಅವರು ಭಾರತದ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1980ಕ್ಕೂ ಮೊದಲು ಖಾಮ್ ಹೋರಾಟ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ)ದ ಮೂಲಕ ರಾಜಕೀಯ ಆರಂಭಿಸಿದ್ದ ಸೋಲಂಕಿ ಅವರು ಗುಜರಾತ್ ಪ್ರಭಾವಿ ರಾಜಕಾರಣಿ ಎನಿಸಿಕೊಂಡಿದ್ದರು.

ವೃತ್ತಿಯಲ್ಲಿ ವಕೀಲರಾಗಿದ್ದ ಸೋಲಂಕಿ ಗುಜರಾತ್ ನ ಆನಂದ್ ಬಳಿಯ ಬೊರ್ಸಾದ್ ಪಟ್ಟಣದ ಕ್ಷತ್ರಿಯ ಮನೆತನದವರಾಗಿದ್ದಾರೆ. ಅವರು 1977 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. 1980 ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷವು 182 ಸ್ಥಾನಗಳಲ್ಲಿ 141 ಸ್ಥಾನಗಳನ್ನು ಗಳಿಸಿತು ಮತ್ತು ಅಂದು ಬಿಜೆಪಿ ಕೇವಲ ಒಂಬತ್ತು ಸ್ಥಾನಗಳನ್ನು ಗಳಿಸಿತು.

ಪ್ರಧಾನಿ ಮೋದಿ ಸಂತಾಪ
ಇನ್ನು ಸೋಲಂಕಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಸೋಲಂಕಿ ಅವರು ಅಸಾಧಾರಣ ನಾಯಕರಾಗಿದ್ದರು, ಗುಜರಾತ್ ರಾಜಕೀಯದಲ್ಲಿ ದಶಕಗಳಿಂದ ಪ್ರಮುಖ ಪಾತ್ರ ವಹಿಸಿದ್ದರು. ಅವರು ಸಮಾಜಕ್ಕೆ ಮಾಡಿದ ಸಮೃದ್ಧ ಸೇವೆಗಾಗಿ ಅವರನ್ನು ಸ್ಮರಿಸಲಾಗುವುದು. ಅವರ ನಿಧನದಿಂದ ಬೇಸರವಾಗಿದೆ.  ಸೋಲಂಕಿ ತುಂಬಾ ಪುಸ್ತಕಗಳನ್ನು ಓದುತ್ತಿದ್ದರು. ಅವರು ಅಪ್ರತಿಮ ಪುಸ್ತಕ ಪ್ರೇಮಿ. ಸಂಸ್ಕೃತಿಯ ಬಗ್ಗೆ ಒಲವು ಹೊಂದಿದ್ದರು. ನಾನು ಅವರನ್ನು ಭೇಟಿಯಾದಾಗ ಅಥವಾ ಅವರೊಂದಿಗೆ ಮಾತನಾಡುವಾಗಲೆಲ್ಲಾ ನಾವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದೆವು.  ಅವರು ಇತ್ತೀಚೆಗೆ ಓದಿದ ಹೊಸ ಪುಸ್ತಕದ ಬಗ್ಗೆ ಹೇಳುತ್ತಿದ್ದರು. ಅವರ ಅಗಲಿಕೆ ನೋವು ತಂದಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *